

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಂಗಾರು ಮಳೆ ಅಭಾವದಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಹಾಗೂ ಕಾಮಗಾರಿ ಉದ್ಯೋಗ ನೀಡಲು ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಬಹುತೇಕ ಮುಂಗಾರು ಮಳೆ ಕೈ ಕೊಟ್ಟಿದೆ. ಕೆಲ ಕಡೆಗಳಲ್ಲಿ ಸಣ್ಣ ಮಳೆಯಾಗಿದ್ದರೂ ಬಿತ್ತನೆಗೆ ಅವಶ್ಯಕ ತೇವಾಂಶ ಇಲ್ಲ. ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿ ಹೊಲ, ಗದ್ದೆಗಳಲ್ಲಿ ಪೈರು ಬರುವ ಸಮಯವಾದರೂ ಸೂಕ್ತ ಸಮಯಕ್ಕೆ ಮಳೆಯಾಗದಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ. ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಒಣ ಬರ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈಗಾಗಲೇ ಬಿತ್ತನೆ ಬೀಜ, ಔಷಧಿಗೆ ಸಾಲ ಮಾಡಿರುವ ರೈತರು ಹೈರಾಣಾಗಿದ್ದಾರೆ. ಈ ಸಮಯದಲ್ಲಿ ಸರ್ಕಾರ ಅವರಿಗೆ ಆಸರೆಯಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ನರೇಗಾ ಯೋಜನೆಯಡಿ ವರ್ಷ ಪೂರ್ತಿ ಉದ್ಯೋಗ ನೀಡುವುದು, ರೈತರ ಸಾಲ ಮನ್ನಾ, ಕಾರ್ಖಾನೆಗಳನ್ನು ತೆರೆದು ಉದ್ಯೋಗ ಸೃಷ್ಟಿ, ಪ್ರತಿ ಕುಟುಂಬಕ್ಕೆ ಅಗತ್ಯ ಪಡಿತರ ವಿತರಣೆ ಮಾಡಬೇಕು. ಪ್ರಸಕ್ತ ಬಜೆಟ್‌ನಲ್ಲಿ ಮುಂಗಾರು ಅಭಾವದ ಹಿನ್ನೆಲೆಯಲ್ಲಿ ರೈತರಿಗೆ ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆ, ರೈತರ ಎಲ್ಲ ಸಾಲ ಮನ್ನಾ, ರೈತರಿಗೆ ಬಿತ್ತನೆಗೆ ಬೀಜ,ರಸಗೊಬ್ಬರ ಉಚಿತವಾಗಿ ವಿತರಿಸುವುದು, ಬರ ಪರಿಸ್ಥಿತಿ ಎದುರಾದರೆ ಸಮರ್ಥವಾಗಿ ಎದುರಿಸಲು ಪೂರ್ವ ಯೋಜನೆ ಸಿದ್ಧತೆ ಸೇರಿ ಇತರ ಅನುಕೂಲಕರ ಯೋಜನೆ ಘೋಷಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು.
ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಹನುಮೇಶ ಹುಡೇದ, ಗೋವಿಂದ ಕೃಷ್ಣಪ್ಪನವರ, ಶ್ರೀದೇವಿ ದೊಡ್ಡಮನೆ, ಮಂಜುಳಾ ಜಗದಾಳೆ, ಸೋಮೇಶ, ಇತರರು ಇದ್ದರು.