ರೈತರಿಗೆ ಪರಿಹಾರ ನೀಡಲು ಆಗ್ರಹ

26 Mallikarjuna (2)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ಬೀಜ ಮೊಳಕೆ ಒಡೆದು ಹಾಳಾಗಿವೆ. ಹೀಗಾಗಿ ಪ್ರತಿ ರೈತರಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡರ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಬೆಳೆಗಳಾದ ಹೆಸರು, ಈರುಳ್ಳಿ, ಉದ್ದು ಹಾಗೂ ಹತ್ತಿ ಮಳೆಯಿಲ್ಲದೆ ಒಣಗಿ ಹೋಗಿವೆ. ಇದರಿಂದ ರಾಜ್ಯದ ರೈತರು ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ. ನಾಚಿಕೆ, ಮಾನ, ಮರ್ಯಾದೆ ಇಲ್ಲದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ, ಬಿಜೆಪಿ ವಿಪಕ್ಷ ನಾಯಕರ ಆಯ್ಕೆಯಲ್ಲಿ ಕಾಲಹರಣ ಮಾಡತ್ತಿವೆ. ಇವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲ. ಅಧಿಕಾರದ ಹಪಾಹಪಿಗೆ ಬಡಿದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2022ನೇ ಸಾಲಿನ ಬೆಳೆವಿಮೆ, ಬೆಳೆ ಪರಿಹಾರ ಬಿಡುಗಡೆ ಮಾಡಿಲ್ಲ. ಆದರೆ, ಸರ್ಕಾರ, ಅಧಿಕಾರಿಗಳು ರೈತರ ಕಣ್ಣಿಗೆ ಮರೆಚಿದ್ದಾರೆ. ತಕ್ಷಣ ಬೆಳೆವಿಮೆ ಹಾಗೂ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿ ರೈತರ ಬದುಕಿಗೆ ಆಸರೆ ಆಗಬೇಕು ಎಂದರು.
ಪ್ರಸಕ್ತ ಸಾಲಿಗೆ ಪ್ರತಿ ರೈತರ ಖಾತೆಗೆ 2 ಲಕ್ಷ ರೂ. ಬೆಳೆ ಪರಿಹಾರ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 1 ರೂ. ಬಡ್ಡಿ ದರದಂತೆ 10 ಲಕ್ಷ ರೂ.ವರೆಗೆ ಸಾಲ ನೀಡಬೇಕು. 2023ನೇ ಸಾಲಿನ ಬೆಳೆವಿಮೆ ತುಂಬಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಶಿವಮ್ಮ ಹಡಪದ, ರಾಚಯ್ಯ ಮಠದ, ಪರಿಮಳ ಮಾಳಗಿ, ಬಸವ್ವ ಹರ್ತಿ, ಬಸಪ್ಪ ಗಾಣಿಗೇರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net