ರೈತರಿಗೆ ನೋವಾಗದಂತೆ ನಡೆದುಕೊಳ್ಳಿ

Honnali, revenue, progress, meeting,
Published on

ಹೊನ್ನಾಳಿ: ರೈತರಿಗೆ ಕಂದಾಯ ಇಲಾಖೆ ತವರು ಮನೆ ಇದ್ದಂತೆ. ಅವರ ಮನಸಿಗೆ ನೋವಾಗದಂತೆ ಅಗತ್ಯ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನ ಬೆಳಗುತ್ತಿಯ ಯುವ ಹಾಸ್ಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಹೊನ್ನಾಳಿ- ನ್ಯಾಮತಿ ತಾಲೂಕಿನ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ವಿವಿಧ ಇಲಾಖೆಗಳ ಪ್ರತ್ಯೇಕ ಸಭೆ ಮಾಡಿದಾಗ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತ ಕಂಡು ಬಂದಿದೆ. ಇವು ಮರುಕಳಿಸದಂತೆ ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಸ್ಪಂದಿಸಿ, ಕೆಲಸ ಮಾಡಬೇಕು. ಒಂದು ವೇಳೆ ದೂರು ಬಂದರೆ ಶಿಸ್ತುಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಗರ್‌ಹುಕುಂ ಸಮಿತಿ ರಚನೆಗೆ ಸರ್ಕಾರಕ್ಕೆ ಪತ್ರ ಬರೆಯುತ್ತಲೇ ಬರಲಾಗಿದ್ದರೂ ಇದುವರೆಗೂ ಯಾವ ಸರ್ಕಾರವೂ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈಗ ನಮ್ಮ ಸರ್ಕಾರ ಬಂದ ಒಂದೇ ತಿಂಗಳಲ್ಲಿ ಸಮಿತಿ ರಚಿಸಲು ನಿರ್ದೇಶನ ನೀಡಿದೆ. ಶೀಘ್ರವೇ ಈ ಕಾರ್ಯಮಾಡಲಾಗುವುದು ಎಂದರು.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ, ಎಲ್ಲ ಸಚಿವರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದು ಅವರ ನಿರ್ದೇಶನಗಳನ್ನು ಶಾಸಕರು ಪಾಲಿಸುತ್ತಿದ್ದಾರೆ. ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ಉಪವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ, ಹೊನ್ನಾಳಿ ತಹಸೀಲ್ದಾರ್ ತಿರುಪತಿ ಪಟೇಲ್, ನ್ಯಾಮತಿ ತಹಸೀಲ್ದಾರ್ ಆರ್.ವಿ.ಕಟ್ಟಿ, ಸರ್ವೆ ಇಲಾಖೆಯ ಅಧಿಕಾರಿ ಸುರೇಶ್, ಗ್ರೇಡ್ 2 ತಹಸೀಲ್ದಾರ್ ಸುರೇಶ್, ಉಪ ತಹಸೀಲ್ದಾರ್‌ಗಳಾದ ಮಂಜುನಾಥ್ ಇಂಗಳಗೊಂದಿ, ಸವಿತಾ, ನಂದ್ಯಪ್ಪ, ಕೆಂಚಪ್ಪ, ಚಂದ್ರಶೇಖರ್, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net