

ಮಡಿಕೇರಿ: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಇದರ ಜಂಟಿ ಆಶ್ರಯದಲ್ಲಿ ಗೇರು, ಕಾಳುಮೆಣಸು ಮತ್ತು ತೆಂಗು ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವು ಮಂಗಳವಾರ ಪೆರಾಜೆ ಸಹಕಾರ ಸದನದಲ್ಲಿ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಮತ್ತು ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪೆರಾಜೆ ಗ್ರಾ.ಪಂ.ಅಧ್ಯಕ್ಷ ಜಯಲಕ್ಷ್ಮೀ ಧರಣೀಧರ ಉದ್ಘಾಟಿಸಿದರು.
ಪುತ್ತೂರಿನ ಐಸಿಎಆರ್-ಗೇರು ಸಂಶೋಧನ ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎನ್.ಯದುಕುಮಾರ್, ಗೇರು ಮತ್ತು ಕಾಳುಮೆಣಸು ಬೇಸಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ರೈತ ಸದಸ್ಯರಿಗೆ ತಿಳಿಸಿದರು. ಕಿದು ನೆಟ್ಟಣ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ತಾಂತ್ರಿಕ ಅಧಿಕಾರಿ ಎ.ಎಸ್.ಗೋಪಾಲಕೃಷ್ಣ, ತೆಂಗು ಬೆಳೆಯ ಸಮಗ್ರ ಮಾಹಿತಿ ನೀಡಿದರೆ, ತೋಟಗಾರಿಕೆ ಇಲಾಖೆಯ ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ಬಿ.ಸಿ.ನಾಚಪ್ಪ, ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಕೃಷಿ ಈ ವಿಚಾರದ ಉಪಯುಕ್ತ ಮಾಹಿತಿಗಳನ್ನು ರೈತ ಸದಸ್ಯರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ಎಸ್.ಚಂದ್ರಶೇಖರ್, ತೋಟಗಾರಿಕಾ ಇಲಾಖೆಯ ಅಧಿಕಾರಿ ಡಾ.ಎಸ್.ವಿಜೇತ್, ಸಂಘದ ಪ್ರ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ಲೋಕೇಶ್ ಇದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 100ಕ್ಕೂ ಹೆಚ್ಚಿನ ರೈತ ಸದಸ್ಯರಿಗೆ ಈ ಸಂದರ್ಭದಲ್ಲಿ ಹಣ್ಣಿನ ಗಿಡಗಳ ವಿತರಣೆ ಮಾಡಲಾಯಿತು.