

ಕಮಲನಗರ: ಚಿಮ್ಮೇಗಾಂವ ವ್ಯಾಪ್ತಿಯಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಿರ್ಮಿಸುತ್ತಿರುವ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರಕ್ಕೆ ಶಾಸಕ ಪ್ರಭು ಚವ್ಹಾಣ್ ಶುಕ್ರವಾರ ದಿಢೀರ್ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಕೇಂದ್ರ ಸರ್ಕಾರದ ಮೇಲೆ ಪದೇಪದೆ ಒತ್ತಡ ಹೇರಿ ಔರಾದ್ ವಿಧಾನಸಭೆ ಕ್ಷೇತ್ರಕ್ಕೆ ಪವರ್ ಗ್ರಿಡ್ ಉಪಕೇಂದ್ರ ತಂದಿದ್ದೇನೆ. ಹಿಂದೆ ಎರಡು ಸಲ ವಿಫಲವಾಗಿದ್ದರೂ ಪಟ್ಟು ಬಿಡದೆ ಕೇಂದ್ರ ಸಚಿವರನ್ನು ಭೇಟಿಯಾಗಿ ಯೋಜನೆ ಬರುವಂತೆ ಮಾಡಿದ್ದು, ಕೆಲಸ ಸರಿಯಾಗಿ ಆಗಬೇಕು. ಏನಾದರೂ ಸಮಸ್ಯೆ ಎದುರಾದರೆ ನೇರವಾಗಿ ನನ್ನನ್ನು ಭೇಟಿಯಾಗಿ. ಅದನ್ನು ಬಿಟ್ಟು ರೈತರನ್ನು ಏಕೆ ಸತಾಯಿಸುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೊಲಗಳಿಗೆ ಹೋಗುವ ರಸ್ತೆಗಳನ್ನು ಮುಚ್ಚಿ ಹಾಕಿದ್ದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಎಷ್ಟು ಸಲ ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ. ಜಮೀನು ನೀಡಿದ ಎಲ್ಲರಿಗೆ ಸಮಾನವಾಗಿ ಹಣ ಪಾವತಿಸದೆ ತಾರತಮ್ಯ ಮಾಡಲಾಗುತ್ತಿದೆ. ಕೇಳಲು ಹೋದರೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ಸಿಡಿದೆದ್ದ ಶಾಸಕರು, ರಸ್ತೆಗಳನ್ನೆಲ್ಲ ಮುಚ್ಚಿ ಹಾಕಿದರೆ ರೈತರು ಹೊಲಗಳಿಗೆ ಹೇಗೆ ಹೋಗಬೇಕು? ಕೂಡಲೇ ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಪರಿಹಾರಧನ ವಿತರಣೆಯಲ್ಲಿ ತಾರತಮ್ಯ ಸರಿಯಲ್ಲ. ನಿಯಮದಂತೆ ಎಲ್ಲರಿಗೂ ಪರಿಹಾರ ಕಲ್ಪಿಸಬೇಕು. ಜಮೀನಿಗೆ ಸಂಬಂಧಿಸಿದ ಏನಾದರೂ ಸಮಸ್ಯೆಗಳಿದ್ದರೆ ತಹಸೀಲ್ದಾರ್ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಚವ್ಹಾಣ್, ಔರಾದ್ ಕ್ಷೇತ್ರಕ್ಕೆ ಸಣ್ಣ ಪುಟ್ಟ ಕೈಗಾರಿಕೆಗಳನ್ನು ತರುವ ಸಂಕಲ್ಪದೊಂದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿರುವೆ. ಈ ದಿಸೆಯಲ್ಲಿ ಕಮಲನಗರ ತಾಲೂಕಿಗೆ ಪವರ್ ಗ್ರಿಡ್ ವಿದ್ಯುತ್ ಉಪಕೇಂದ್ರ ತರಲಾಗಿದೆ. ಜಿಲ್ಲಾಧಿಕಾರಿಯೊಂದಿಗೆ ಸಭೆ, ರೈತರೊಂದಿಗೆ ಸಮಾಲೋಚನೆ ನಡೆಸಿ ಜಮೀನು ಸಂಬಂಧಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದು, ಕೆಲಸ ಆರಂಭವಾಗಿರುವುದು ಸಂತಸದ ವಿಷಯ ಎಂದರು.
ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಣೇಶ ಮಾತನಾಡಿ, ೨೧೪೭ ಕೋಟಿ ಮೊತ್ತದ ಯೋಜನೆ ಇದಾಗಿದ್ದು, ೧೬೩ ಎಕರೆ ಜಮೀನಿನಲ್ಲಿ ಪವರ್ ಗ್ರಿಡ್ ಸೆಂಟರ್ ನಿರ್ಮಿಸಲಾಗುತ್ತಿದೆ. ೬೭೫ ಕೆವಿ ಪವರ್ ಟ್ರಾನ್ಸ್ಮಿಷನ್ ಸಾಮರ್ಥ್ಯದ ಕರ್ನಾಟಕ ಮೊದಲ ಪವರ್ ಗ್ರಿಡ್ ಉಪ ಕೇಂದ್ರ ಇದಾಗಿದೆ. ಕ್ಷೇತ್ರದಲ್ಲಿ ೧೨ ಸಾವಿರ ಎಕರೆಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವ ಯೋಜನೆಯೂ ಇದ್ದು, ಜಮೀನು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.
ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ನಿಗಮದ ಇಂಜಿನಿಯರ್ ಶಿವರಾಜ, ಮುಖಂಡರಾದ ಶಿವಾಜಿರಾವ ಪಾಟೀಲ್ ಮುಂಗನಾಳ, ಶಿವರಾಜ ಅಲ್ಮಾಜೆ, ಅನೀಲ್ ಬಿರಾದಾರ, ಧನಾಜಿ ರಾಠೋಡ್, ಮಹಾದೇವ ಮಾಳಕಾರೆ, ಸಂಜು ಪಾಟೀಲ್ ಚಿಮ್ಮೇಗಾಂವ, ರಾಜಕುಮಾರ ಸೋನಾಳ ಇತರರಿದ್ದರು.
ರೈತರಿಂದ ನಿರಂತರ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಜಮೀನು ನೀಡಿದ ಬಡ ರೈತರಲ್ಲಿ ಬಹುತೇಕರು ಎರಡ್ಮೂರು ಎಕರೆ ಜಮೀನು ಹೊಂದಿದ್ದು, ಸಮರ್ಪಕ ಪರಿಹಾರ ಸಿಗದಿದ್ದಲ್ಲಿ ಬೀದಿಗೆ ಬರಬೇಕಾಗುತ್ತದೆ. ಹೀಗಾಗಿ ಅವರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.
| ಪ್ರಭು ಚವ್ಹಾಣ್ ಶಾಸಕ