

ದೊಡ್ಡಬಳ್ಳಾಪುರ: ನಂದಿಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಯಿಂದ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಭರವಸೆ ನೀಡಿದರು.
ರೋಪ್‌ವೇ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಯೋಜನೆಗೆ ದೊಡ್ಡಬಳ್ಳಾಪುರ ರೈತರ ಜಮೀನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ಭೂಮಿ ನೀಡಬೇಕು. ಇಲ್ಲವಾದಲ್ಲಿ ಸ್ವಾಧೀನಪಡಿಸಿಕೊಂಡಿರುವ ಭೂಮಿ ಹಿಂದಕ್ಕೆ ಕೊಡಬೇಕು ಎಂಬ ರೈತರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು ರೈತರಿಗೆ ಬದಲಿ ಭೂಮಿ ಕೊಡುವುದೋ ಅಥವಾ ಸೂಕ್ತ ಪರಿಹಾರ ಕೊಡುವುದೋ ಎಂಬುದನ್ನು ನಿರ್ಧರಿಸಬೇಕಿದೆ. ಇದಕ್ಕಾಗಿ ಶೀಘ್ರದಲ್ಲೇ ರೈತರೆಲ್ಲರ ಸಭೆ ಕರೆಯಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.
11 ಎಕರೆ ಜಮೀನು ಸ್ವಾಧೀನ: ರೋಪ್‌ವೇ ನಿರ್ಮಾಣವಾಗುವ ಸ್ಥಳದಲ್ಲೇ ಪ್ರವಾಸಿಗರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ದೊಡ್ಡಬಳ್ಳಾಪುರದ ರೈತರ 11 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 71ರನ್ವಯ ಪಾರ್ಕಿಂಗ್ ಸೌಲಭ್ಯದ ಕಾಮಗಾರಿಗೆ ಸ್ಥಳ ಕಾಯ್ದಿರಿಸಲು ಸೂಚಿಸಲಾಗಿದೆ. ಈ ಭೂಮಿ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಗಡಿಭಾಗದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಡುಕು ಹೊಸಹಳ್ಳಿಯ ಸರ್ವೇ ನಂ.28 ರಲ್ಲಿ 8 ಎಕರೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿಯ ಸರ್ವೇ ನಂ.94ರಲ್ಲಿ 3.20 ಎಕರೆ ಜಾಗವನ್ನು ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ.
ಚಿಕ್ಕಬಳ್ಳಾಪುರದ ಮಡುಕು ಹೊಸಹಳ್ಳಿಯ ಸರ್ವೇ ನಂ.28ರಲ್ಲೇ ಸರ್ಕಾರಿ ಗೋಮಾಳ ಜಾಗ ಇರುವಾಗ, ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿಯ ರೈತರ ಜಮೀನನ್ನು ಏಕೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬುದು ರೈತರ ಪ್ರಶ್ನೆಯಾಗಿದೆ.
ಏಕಾಏಕಿ ಭೂಸ್ವಾಧೀನ: ಹೆಗ್ಗಡಿಹಳ್ಳಿ ಸರ್ವೇ ನಂ.94ರಲ್ಲಿ ರೈತರು 25 ವರ್ಷಗಳಿಂದ ಸಾಗುವಳಿ ಮಾಡಿಕೊಂಡಿದ್ದಾರೆ. ಕಲ್ಲು ಬಂಡೆಗಳಿಂದ ಕೂಡಿದ್ದ ಜಾಗವನ್ನು ಸಾಗುವಳಿ ಭೂಮಿಯಾಗಿಸಿಕೊಂಡು ರಾಗಿ ಬೆಳೆಯುತ್ತಿದ್ದಾರೆ. ಸರ್ಕಾರ ರೈತರಿಗೆ ಬಗರ್ ಹುಕುಂ ಸಾಗುವಳಿ ಚೀಟಿಯನ್ನೂ ನೀಡಿದೆ. ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿ ರೈತರು ಅರ್ಜಿ ಸಲ್ಲಿಸಿದ್ದಾರೆ,. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸ್ಕೆಚ್ ಸಹ ಸಿದ್ಧಪಡಿಸಿದ್ದಾರೆ. ಆದರೆ ಈಗ ಸರ್ಕಾರ ಪಾರ್ಕಿಂಗ್ ಜಾಗಕ್ಕಾಗಿ ರೈತರ ಜಮೀನನ್ನು ಏಕಾಏಕಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಜಮೀನು ಕಳೆದುಕೊಳ್ಳುವ ಭಯದಲ್ಲಿರುವ ರೈತರ ಪ್ರಾಣ ಕೊಟ್ಟಾದರೂ ಜಮೀನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾರೆ. ಸ್ಥಳಕ್ಕೆ ಬಂದಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೂ ಮನವಿಪತ್ರ ಸಲ್ಲಿಸಿದ್ದಾರೆ.