ರೈತರಿಗೆ 7 ಗಂಟೆ ವಿದ್ಯುತ್‌ನಲ್ಲಿ ಕೊರತೆ ಇರದು

sri congr
ಶೃಂಗೇರಿಯಲ್ಲಿ ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಕೆ.ಜಾರ್ಜ್ ಉದ್ಘಾಟಿಸಿದರು. ಜಯಪ್ರಕಾಶ್ ಹೆಗ್ಡೆ, ಕುಕ್ಕಡಿಕೆ ರವೀಂದ್ರ, ಗೇರ್‌ಬೈಲ್ ನಟರಾಜ್, ಶಕೀಲಾ ಗುಂಡಪ್ಪ, ಶ್ರೀಜಿತ್ ಗೌಡ, ದುರ್ಗಾಚರಣ್ ಇತರರಿದ್ದರು.
Published on

ಶೃಂಗೇರಿ: ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಾಗ ಸಹಜವಾಗಿ ಕೆಲವು ತಪ್ಪು ನಡೆಯುತ್ತದೆ. ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡಲು ಸರ್ಕಾರ ಬದ್ಧವಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸಲು ಮೆಸ್ಕಾಂ ಎಇಇ ಜತೆಗೆ ಲೈನ್‌ಮ್ಯಾನ್‌ಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಕೆ.ಜಾರ್ಜ್ ತಿಳಿಸಿದರು.

ಆದಿಚುಂಚನಗಿರಿ ಸಮುದಾಯಭವನದಲ್ಲಿ ಬುಧವಾರ ಆಯೋಜಿಸಿದ್ದ ಕ್ಷೇತ್ರಮಟ್ಟದ ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಸರ್ಕಾರ ವಿದ್ಯುತ್ ಬೇಡಿಕೆ ಕಡಿಮೆಯಿದ್ದಾಗ ಪವರ್ ಪ್ಲಾಂಟ್‌ನ್ನು ಮುಚ್ಚುತ್ತಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 18 ಸಾವಿರ ಮೆಗಾವ್ಯಾಟ್ ವಿದ್ಯುತ್ ನೀಡಲಾಗುತ್ತಿದೆ. ಈ ವರ್ಷ 60ರಿಂದ 70ರ ತನಕ ವಿದ್ಯುತ್ ಉಪವಿತರಣಾ ಕೇಂದ್ರವನ್ನು, ಮುಂಬರುವ ವರ್ಷ ಇನ್ನಷ್ಟು ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರ ನೀಡುವ ಸೌಲಭ್ಯಗಳ ಕುರಿತು ಸಮಾಜದ ಕಟ್ಟಕಡೆಯ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಕಾರ್ಯಕರ್ತರು ಬೂತ್‌ಮಟ್ಟದಿಂದ ಮಾಡಬೇಕಿದೆ. ಬೂತ್ ಮಟ್ಟದಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಅದಕ್ಕೆ ಸಮರ್ಪಕವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಕಾರ್ಯಕರ್ತರೇ ಜೀವಾಳ. ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ನಾಯಕರು ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಅವರಿಂದ ನಮಗೆ ಯಾವುದೇ ಸರ್ಟಿಫಿಕೇಟ್ ಬೇಡ. ಸರ್ಕಾರ ಮಾಡಿರುವ ಅಭಿವೃದ್ಧಿಯ ಮಾಹಿತಿ ಪುಸ್ತಕ ರಚಿಸಿ ಕಾರ್ಯಕರ್ತರಿಗೆ ತಲುಪಿಸಬೇಕಿದೆ. ಸರ್ಕಾರ ಸುಭದ್ರವಾಗಿದ್ದು ಜನಸಾಮಾನ್ಯರ ಅಭಿವೃದ್ಧಿಗೆ ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸುತ್ತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಹಾಗೂ ಯುವಕರಿಗೆ ಶಕ್ತಿ ನೀಡಿದ್ದೇವೆ. ಇದು ದೊಡ್ಡ ಸಾಧನೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿ ರಸ್ತೆ ಹಾಗೂ ತೂಗುಸೇತುವೆಗಳಿಗೆ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ರಾಜ್ಯ ಕಿಸಾನ್ ಸೆಲ್ ಅಧ್ಯಕ್ಷ ಸಚಿನ್ ಮೀಗಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಎಐಸಿಸಿ ಕಾರ್ಯದರ್ಶಿ ಸಂದೀಪ್, ಕೆಪಿಸಿಸಿ ಸದಸ್ಯರಾದ ನಟರಾಜ್ ಬಾಳೆಮನೆ, ಇಪ್ತಿಕಾರ್ ಅಹಮದ್, ಸದಾಶಿವ, ಶೃಂಗೇರಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net