

ಸೋರಲಮಾವು ಶ್ರೀಹರ್ಷ ತುಮಕೂರು
2023 ವಿಶ್ವಸಂಸ್ಥೆಯಿಂದ ಸಿರಿಧಾನ್ಯ ವರ್ಷ ಎಂದು ಘೋಷಿಸಲ್ಪಟ್ಟಿದ್ದರೂ ಸಿರಿಧಾನ್ಯಗಳ ತವರು ಎನಿಸಿರುವ ತುಮಕೂರು ಜಿಲ್ಲೆಯಲ್ಲಿ ಸಿರಿಧಾನ್ಯಕ್ಕಿರುವ ಪ್ರೋತ್ಸಾಹ ಬೆಳೆಯುವ ರೈತರಿಗಿಲ್ಲದಾಗಿದೆ.
ರೈತರು ಸಿರಿಧಾನ್ಯ ಬೆಳೆಯಲು ಸರ್ಕಾರದ ವತಿಯಿಂದ ನೀಡಲಾಗುತ್ತಿದ್ದ ಪ್ರೋತ್ಸಾಹಧನ ‘ರೈತ ಸಿರಿ’ ಕರೊನಾ ನೆಪಮಾಡಿಕೊಂಡು ಸ್ಥಗಿತ ಮಾಡಿದ್ದು, ಮತ್ತೆ ಆರಂಭವಾಗಿಲ್ಲ. ಹಾಗಾಗಿ, ಸಿರಿಧಾನ್ಯ ಬೆಳೆಯಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಸಿರಿಧಾನ್ಯ ವರ್ಷ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ‘ರೈತ ಸಿರಿ’ ಪುನರಾರಂಭಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಪ್ರಸಕ್ತ ವರ್ಷ 2.20 ಎಕರೆ ಪ್ರದೇಶದಲ್ಲಿ ಬೆಳೆದರೆ ಕೇವಲ 6 ಸಾವಿರ ರೂ. ಪ್ರೋತ್ಸಾಹಧನ ನೀಡಲಿದೆ.
ಈ ಹಿಂದೆ ಒಂದು ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆದರೆ 10 ಸಾವಿರ ರೂ. ಪ್ರೋತ್ಸಾಹ ನೀಡುವುದಾಗಿ ಘೋಷಿಸಿದ್ದ ವರ್ಷದಲ್ಲಿ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆದ ದಾಖಲೆಯೂ ತುಮಕೂರು ಜಿಲ್ಲೆಯಲ್ಲಿದೆ.
ಆನ್‌ಲೈನ್ ಕ್ರಾಪ್ ಸರ್ವೇಯಲ್ಲಿ ಸಿರಿಧಾನ್ಯ ಎಂದು ದಾಖಲಾಗಿರುವ ರೈತರಿಗೆ ರೈತಸಿರಿ ಯೋಜನೆ ತಲುಪಲಿದ್ದು, ಅಲ್ಲಿಯೂ ಸಾಕಷ್ಟು ತಾಂತ್ರಿಕ ದೋಷಗಳಾಗಿರುವ ಸಾಧ್ಯತೆಯಿಂದ ಬಹುತೇಕ ಬೆಳೆಗಾರರು ವಂಚಿತರಾಗಲಿದ್ದಾರೆ. ಹಾಗಾಗಿ, ಕೃಷಿ ಇಲಾಖೆ ದಾಖಲೆ ಆಧಾರದ ಮೇಲೆ ರೈತರಿಂದ ನೇರವಾಗಿ ಅರ್ಜಿ ಪಡೆದು ಪ್ರೋತ್ಸಾಹಧನ ನೀಡಬೇಕು ಎಂಬ ಆಗ್ರಹವಿದೆ. ಜಿಲ್ಲೆಯಲ್ಲಿ 4.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಅವಕಾಶವಿದ್ದು, ಸರ್ಕಾರದ ಪ್ರೋತ್ಸಾಹಧನ ಕೊಟ್ಟರಷ್ಟೇ ರೈತರು ಸಿರಿಧಾನ್ಯ ಬೆಳೆಯಲು ಸಾಧ್ಯವಿದೆ.
ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯಲು ನಿರಾಸಕ್ತಿ: ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಸಿರಿಧಾನ್ಯ ಸದ್ಯಕ್ಕೆ ನೂರಾರು ಹೆಕ್ಟೇರ್‌ಗೆ ಬಂದಿರುವುದು ಆತಂಕಕಾರಿ ವಿಷಯವಾಗಿದೆ. 2020ರಲ್ಲಿ ಪ್ರೋತ್ಸಾಹಧನದ ಭರವಸೆಯಿಂದ 6500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಸಿರಿಧಾನ್ಯಗಳ ಬಿತ್ತನೆ ಪ್ರದೇಶ ತುಂಬ ಕಡಿಮೆಯಾಗಿದೆ. ಇಲಾಖೆಯಲ್ಲಿ ಅಂಕಿ, ಅಂಶಗಳನ್ನು ತೋರಿಸಿಕೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳು 2022ರಲ್ಲಿ 2195ಹೆ. ಪ್ರದೇಶದಲ್ಲಿ 3600 ರೈತರು ಸಿರಿಧಾನ್ಯ ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ದಾಖಲೆಯಲ್ಲಿದೆ ಆದರೆ, ಆನ್‌ಲೈನ್ ಬೆಳೆ ಸಮೀಕ್ಷೆಯಲ್ಲಿ ಬಿತ್ತನೆಯ ಪ್ರಮಾಣ ಸಾವಿರ ದಾಟಿಲ್ಲ.
ಸಿರಿಧಾನ್ಯಕ್ಕೆ ‘ವಿಶ್ವ’ ಮನ್ನಣೆ: ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗುವ ಕರ್ನಾಟಕದ ಬರಕ್ಕೆ ಕೊರಲೆ, ನವಣೆ, ಹಾರಕ, ಸಾಮೆ, ಊದಲು, ಬರಗು, ಸಜ್ಜೆ ಮತ್ತಿತರ ಸಿರಿಧಾನ್ಯಗಳು ಪರ್ಯಾಯವಾಗಿದ್ದು, ಇವುಗಳ ಆಹಾರ ಗುಣ ತಿಳಿದ ನಗರವಾಸಿಗಳಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಧನ ‘ರೈತಸಿರಿ’ ಘೋಷಿಸಿತ್ತು. ಆರೋಗ್ಯವರ್ಧನ ಎಂಬ ಕಾರಣಕ್ಕೆ ವಿಶ್ವ ಮಟ್ಟದಲ್ಲಿಯೂ ಮಾರುಕಟ್ಟೆ ಸೃಷ್ಟಿಸಿಕೊಂಡ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆ 2023ನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ.