ರೈತರಿಂದ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ

ರೈತರಿಂದ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ
Published on

ಹಾಸನ: ಕೃಷಿ ಇಲಾಖೆ ವತಿಯಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ಸ್ವತಃ ದಾಖಲಿಸಲು ‘ಮುಂಗಾರು ರೈತರ ಬೆಳೆ ಸಮೀಕ್ಷೆ’ ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಎನ್.ರಾಜಸುಲೋಚನಾ ಅವರು ತಿಳಿಸಿದ್ದಾರೆ.
ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ರೈತಸ್ನೇಹಿ ಕಾರ್ಯಕ್ರಮ ಇದಾಗಿದ್ದು, ಈ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುವುದು. ಆದ್ದರಿಂದ ಸ್ವತಃ ರೈತರೇ ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೌಡ್ ಮಾಡಿಕೊಂಡು ಆ ಆಪ್ ಮೂಲಕ ಸಕಾಲಿಕವಾಗಿ ಎಲ್ಲಾ ಬೆಳೆಗಳ ವಿವರಗಳನ್ನು ಅಪ್‌ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ಸಹ ತಪ್ಪಿಸಬಹುದಾಗಿದೆ. ಆದ್ದರಿಂದ ರೈತ ಬಾಂಧವರು ತಮ್ಮ ಮೊಬೈಲ್ ಆಪ್ ಬಳಸಿ ತಾವು ಬೆಳೆದಿರುವ ಬೆಳೆಗಳಿಗೆ ಸ್ವತಃ ತಾವೇ ಬೆಳೆ ಸಮೀಕ್ಷೆ ಮಾಡಿ ಬೆಳೆ ವಿವರಗಳನ್ನು ದಾಖಲಿಸಲು ಎಂದು ಪ್ರಕಟಣೆ ಮೂಲಕ ಕೋರಿದ್ದಾರೆ.
ಮೊಬೈಲ್ ಆಪ್ ಬಳಸುವ ವಿಧಾನ:
ಪ್ಲೇ ಸ್ಟೋರ್‌ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ ಆಪ್-2024-25 ಡೌನ್‌ಲೋಡ್ ಮಾಡಿಕೊಂಡು, ಅಲ್ಲಿ ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಲು ಆಧಾರ್ ಸಂಖ್ಯೆ ನಮೂದಿಸಬೇಕು. ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ದಾಖಲಿಸಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸಬೇಕು. ನಂತರ ಮತ್ತೊಮ್ಮೆ ಮೊಬೈಲ್‌ಗೆ ಬರುವ ಓಟಿಪಿ ನಮೂದಿಸಬೇಕು. ಹಾಗೂ ಮೊಬೈಲ್ ಆಪ್ ಫ್ರೂಟ್ಸ್ ತಂತ್ರಾಂಶಕ್ಕೆ ಸಂಪರ್ಕಗೊಂಡಿದ್ದ ರೈತರ ಗುರುತಿನ ಸಂಖ್ಯೆ (ಎಫ್‌ಐಡಿ) ಯಲ್ಲಿ ಸೇರ್ಪಡೆಯಾದ ಎಲ್ಲಾ ಪಹಣಿ ವಿವರ, ಪಾಲಿಗಾನ್ ಹಾಗೂ ಜಿಐಎಸ್ ಮ್ಯಾಪ್ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿ, ಎಲ್ಲಾ ಸರ್ವೆ ನಂಬರ್‌ಗಳ ವಿವರ ಕಾಣಿಸುತ್ತದೆ. ಬೆಳೆ ಸಮೀಕ್ಷೆ ಪ್ರಾರಂಭಿಸಲು ಸರ್ವೆ ನಂಬರ್ ಆಯ್ಕೆ ಮಾಡಿ, ಸದರಿ ಸರ್ವೆ ನಂಬರ್‌ನ ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ. ತಾವು ಬೆಳೆದ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ ಎರಡು ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.
ಜಿಲ್ಲೆಯ ಎಲ್ಲಾ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲಾ ಬೆಳೆಗಳ ವಿವರವನ್ನು ನಿಗಧಿತ ಸಮಯದೊಳಗೆ ಅಪ್‌ಲೋಡ್ ಮಾಡಬೇಕು. ಒಂದು ವೇಳೆ ರೈತರಿಗೆ ತಮ್ಮ ಬೆಳೆ ದಾಖಲು ಮಾಡಲು ಗೊಂದಲವಿದ್ದಲ್ಲಿ ಸದರಿ ಗ್ರಾಮಕ್ಕೆ ನಿಯೋಜಿಸಿರುವ ಖಾಸಗಿ ನಿವಾಸಿ (ಪಿಆರ್)ಗಳನ್ನು ಸಂಪರ್ಕಿಸಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪಿಆರ್‌ಗಳ ಮೂಲಕ ದಾಖಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಳೆ ಸಮೀಕ್ಷೆಗೆ ನಿಯೋಜಿಸಿರುವ ಗ್ರಾಮದ ಸ್ಥಳೀಯ ಯುವಕರು, ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳು, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net