

ಮೈಸೂರು: ಕಬ್ಬಿಗೆ 150 ರೂ. ಹೆಚ್ಚುವರಿ ಹಣ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ನಡೆಸಿದರು.
ನಗರದ ಮಲೆ ಮಹದೇಶ್ವರ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಆಲಿಸಬೇಕು. ಇಲ್ಲವಾದರೆ ಮುತ್ತಿಗೆ ಹಾಕಲಾಗುವುದು ಎಂದು ಪಟ್ಟು ಹಿಡಿದರು.
ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ರಸ್ತೆಯಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು, ಅಲ್ಲಿಯೇ ಊಟ ಮಾಡಿದರು. ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದ ಮುಖ್ಯದ್ವಾರವನ್ನು ದಾಟಿ ಮುನ್ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಾತಿಗೂ ಜಗ್ಗದೆ ರೈತ ಮುಖಂಡರು ದೊಡ್ಡ ಗೇಟ್ ಹತ್ತಲು ಯತ್ನಿಸಿದಾಗ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರಲ್ಲದೆ, ಲಾಠಿ ಬೀಸಿ ಗುಂಪು ಚದುರಲು ಯತ್ನಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ರೈತರು ಹೋರಾಟ ಮಾಡಿದ ಫಲವಾಗಿ 150 ರೂ. ಹೆಚ್ಚುವರಿ ನೀಡುವಂತೆ ಸರ್ಕಾರ ನಿಗದಿ ಮಾಡಿತ್ತು. ಆದರೆ ಇದುವರೆಗೂ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ 22 ಕೋಟಿ ರೂ. ಬಾಕಿ ನೀಡದೆ ಸತಾಯಿಸುತ್ತಿದೆ. ಸಕ್ಕರೆ ಇಳುವರಿಯಲ್ಲಿ, ತೂಕದಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನ ಕಬ್ಬಿನ ಎಫ್‌ಆರ್‌ಪಿ ದರ ನಿಗದಿ ಕಡಿಮೆಯಾಗಿದೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಕ್ರಮ ಆಗಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರ ಕಪಿಮುಷ್ಟಿಗೆ ಸಿಲುಕಿ ಹಣ ಕೊಡಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಟೀಕಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ 12 ಗಂಟೆಗಳ ನಿರಂತರ ವಿದ್ಯುತ್ ನೀಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿಯೂ ಭರವಸೆ ನೀಡಿದ್ದರೂ ರಾತ್ರಿ ವೇಳೆ ತ್ರೀಫೇಸ್ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ರಾತ್ರಿ ವೇಳೆ ನೀರು ಹಾಯಿಸಲು ಹೋದ ರೈತರು, ಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ವಿರೋಧವಿದೆ. ಇದು ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ಎಂದು ಆರೋಪಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮುಖಂಡರಾದ ಕಿರಗಸೂರು ಶಂಕರ್, ಮೂಕಹಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಹಂಪಾಪುರ ರಾಜೇಶ್, ಕಮಲಮ್ಮ, ರೂಪಾ ಇತರರು ಇದ್ದರು.