ರೈತರಿಂದ 44,848 ಕ್ವಿಂಟಾಲ್ ರಾಗಿ ಖರೀದಿ

16CBP2
Published on

ಚಿಕ್ಕಬಳ್ಳಾಪುರ : ಕನಿಷ್ಠ ಬೆಂಬಲ ಯೋಜನೆಯಡಿ ಸರ್ಕಾರಿ ಕೇಂದ್ರಗಳಲ್ಲಿ 1674 ಮಂದಿ ರೈತರಿಂದ 44,848 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ.

ಜಿಲ್ಲೆಯಲ್ಲಿ ರಾಗಿ ಮಾರಾಟಕ್ಕೆ 2726 ಮಂದಿ ರೈತರು ಹೆಸರು ನೋಂದಾಯಿಸಿಕೊಂಡಿದ್ದು ಇಲ್ಲಿಯವರೆಗೂ 2393 ಮಂದಿ ರಾಗಿ ಮಾರಿದ್ದಾರೆ. ಪ್ರಸ್ತುತ 14,12,73,248 ರೂ. ಮೌಲ್ಯದ ರಾಗಿ ಖರೀದಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ಮಾರುಕಟ್ಟೆಯಲ್ಲಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಉಂಟಾದ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಬೆಂಬಲ ಬೆಲೆ ನೀಡಿ, ನಿಗದಿತ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದು ಅದರಂತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.

ಬ್ರೇಕ್ ಕೊಡಿಸಿದ್ದ ಲಾಕ್‌ಡೌನ್ : ಈಗಾಗಲೇ ಖರೀದಿ ಪ್ರಕ್ರಿಯೆ ಮುಕ್ತಾಯ ಕಂಡು, ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕಾಗಿತ್ತು. ಆದರೆ, ಕರೊನಾ ಸೋಂಕು ವಿಳಂಬಕ್ಕೆ ಕಾರಣವಾಯಿತು.

ಮೊದಲು ರೈತರಿಗೆ ಕಳೆದ 2019 ನೇ ಸಾಲಿನ ಡಿ.26 ರಿಂದ ಜ.10 ರವರೆಗೂ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಮಾರ್ಚ್ ವರೆಗೂ ಖರೀದಿ ಪ್ರಕ್ರಿಯೆ ಘೋಷಿಸಲಾಗಿತ್ತು. ಆದರೆ, ಕರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಖರೀದಿ ಕೇಂದ್ರಗಳ ಬಾಗಿಲು ಮುಚ್ಚಲಾಗಿತ್ತು. ಬಳಿಕ ಏ.20 ರಿಂದ ಮತ್ತೆ ಪ್ರಾರಂಭಿಸಿದ್ದು ಮೇ 31 ರವರೆಗೆ ಖರೀದಿಸಲಾಯಿತು.

1674 ರೈತರಿಗೆ ಹಣ ಪಾವತಿ : ಈಗಾಗಲೇ ಮೊದಲ ಹಂತದಲ್ಲಿ 1674 ಮಂದಿ ರೈತರಿಗೆ 9,83,48,105 ರೂ. ಮೌಲ್ಯದ ರಾಗಿ ಹಣ ಪಾವತಿಸಲಾಗಿದೆ. ಮಾರ್ಚ್‌ನಲ್ಲಿ ಖರೀದಿಸಿದಕ್ಕೆ ಸಂಬಂಧಿಸಿದಂತೆ ಉಳಿದ 719 ಮಂದಿ ರೈತರಿಗೆ 4,29,25,143 ರೂ. ನೀಡಬೇಕಾಗಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಮುಗಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಗಿಗೆ ಹೆಚ್ಚಿದ ಒಲವು : ಪ್ರತಿ ಕ್ವಿಂಟಾಲ್ ಲೆಕ್ಕದಲ್ಲಿ ಭತ್ತಕ್ಕೆ (ಸಾಮಾನ್ಯ) 1815, ಭತ್ತ ಗ್ರೇಡ್ 2 ಗೆ 1835, ಹೈಬ್ರಿಡ್ ಬಿಳಿ ಜೋಳಕ್ಕೆ 2,550 ರೂ., ಬಿಳಿ ಜೋಳ(ಮಾಲ್ದಂಡಿ) 2,570 ರೂ. ಮತ್ತು ರಾಗಿಗೆ 3,150 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಈ ಭಾಗದಲ್ಲಿ ರಾಗಿಗೆ ಬೆಂಬಲ ಬೆಲೆ ಪಡೆಯಲು ರೈತರು ಒಲವು ತೋರಿಸುತ್ತಾರೆ. ಮಳೆ ಅಭಾವದ ನಡುವೆಯೂ ಬಹುತೇಕ ಕೈ ಹಿಡಿಯುವ ವಾರ್ಷಿಕ ಬೆಳೆ ರಾಗಿ. ಇದಕ್ಕೆ ಈ ಭಾಗದ ಹೆಚ್ಚಿನ ಜನರು ರಾಗಿ ಬೆಳೆಯಲು ಮುಂದಾಗುತ್ತಾರೆ. ಜಿಲ್ಲೆಯಲ್ಲಿ ಮುಂಗಾರು ಅವಧಿಗೆ ನಿಗದಿಪಡಿಸಿರುವ 1.40 ಲಕ್ಷ ಹೆ.ಪ್ರದೇಶದಲ್ಲಿ ಬಿತ್ತನೆ ಪೈಕಿ 43 ಸಾವಿರ ಹೆ.ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತದೆ. ಇನ್ನು ಅಸಮರ್ಪಕ ಮಳೆ ಸಂದರ್ಭದಲ್ಲಿ ಹಿಂಗಾರಿನಲ್ಲೂ ರಾಗಿಯನ್ನು ನೆಚ್ಚಿಕೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net