

ಕೆ.ಆರ್.ಪೇಟೆ: ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಕೆಲಸಗಳು ನಿಗದಿತ ಕಾಲಮಿತಿಯೊಳಗೆ ಆಗುವಂತೆ ನೋಡಿಕೊಳ್ಳಬೇಕಾದುದು ನಿಮ್ಮ ಜವಾಬ್ದಾರಿಯಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಬೂಕನಕೆರೆ ಹೋಬಳಿಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆಗೆ ನಿತ್ಯ ನೂರಾರು ರೈತರು ಅಹವಾಲು ಹಿಡಿದು ಬರುತ್ತಾರೆ. ಹಲವಾರು ವರ್ಷಗಳಿಂದಲೂ ಈ ಪ್ರಕ್ರಿಯೆ ಹೀಗೆ ಮುಂದುವರಿದಿದೆ. ಇದಕ್ಕೆ ಇತಿಶ್ರೀ ಹಾಡಬೇಕಾದುದು ಕಂದಾಯ ಇಲಾಖೆಯ ನೌಕರರ ಕೆಲಸ. ಕಂದಾಯ ಇಲಾಖೆ ಅಧಿಕಾರಿಗಳು ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ಮತ್ತು ನಿಗದಿತ ಕಾಲಮಿತಿಯೊಳಗೆ ನಿರ್ವಹಣೆ ಮಾಡಿದಲ್ಲಿ ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಬಹುದಾಗಿದೆ ಎಂದರು.
ರೈತರನ್ನು ಸುಮ್ಮನೆ ಅಲೆದಾಡಿಸುವುದು, ಹಣಕ್ಕೆ ಬೇಡಿಕೆ ಇಡುವುದು ತರವಲ್ಲ. ಯಾವುದೇ ಕೆಲಸಕ್ಕಾದರೂ ಸಂಬಂಧಿಸಿದ್ದ ಚೆಕ್‌ಲಿಸ್ಟ್‌ನೊಂದಿಗೆ ಅರ್ಜಿ ಸಲ್ಲಿಸಲು ರೈತರಿಗೆ ತಿಳಿಸಬೇಕು. ಚೆಕ್ ಲಿಸ್ಟ್ ಪರಿಶೀಲಿಸಿದ ನಂತರ ಕ್ರಮಬದ್ಧವಾಗಿ ಕೆಲಸಗಳು ನಿಗದಿತ ಕಾಲಮಿತಿಯೊಳಗೆ ಆಗುವಂತೆ ನೋಡಿಕೊಳ್ಳಬೇಕಾದದ್ದು ಸಂಬಂಧಿಸಿದ ನೌಕರರ ಕರ್ತವ್ಯ ಎಂದು ಹೇಳಿದರು.
ತಹಸೀಲ್ದಾರ್ ನಿಸರ್ಗಪ್ರಿಯಾ, ಎಡಿಎಲ್‌ಆರ್ ಪರಶಿವನಾಯಕ್, ಬೂಕನಕರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಜೆಡಿಎಸ್ ಮುಖಂಡ ಹುಲ್ಲೇಗೌಡ, ಜವರಾಯಿಗೌಡ, ಶಾಸಕರ ಆಪ್ತಸಹಾಯಕ ಪ್ರತಾಪ್, ರಾಜಸ್ವ ನಿರೀಕ್ಷಕಿ ಚಂದ್ರಕಲಾ ಸೇರಿದಂತೆ ಹಲವರು ಹಾಜರಿದ್ದರು.
ಇದೇ ವೇಳೆ ಪೌತಿಖಾತೆಯ ಫಲಾನುಭವಿಗಳಿಗೆ ಆದೇಶಪತ್ರಗಳನ್ನು ಶಾಸಕ ಮಂಜು ವಿತರಿಸಿದರು.