ರೈತರನ್ನು ಪೂಜ್ಯ ಭಾವನೆಯಿಂದ ಕಾಣಿರಿ

11 KAMPLI 04
Published on

ಕಂಪ್ಲಿ: ರೈತರು ಹಾಗು ಸೈನಿಕರನ್ನು ಗುರುಸ್ಥಾನದಲ್ಲಿ ಗೌರವಿಸುವ ಸಂಪ್ರದಾಯ ಬೆಳೆದುಬಂದಲ್ಲಿ ದೇಶ ಸುಭಿಕ್ಷವಾಗಲು ಸಾಧ್ಯ ಎಂದು ಎಮ್ಮಿಗನೂರಿನ ಹಂಪಿಸಾವಿರ ಮಠದ ವಾಮದೇವ ಶಿವಾಚಾರ್ಯರು ಹೇಳಿದರು.

ಶ್ರೀ ಗುರುಸಿದ್ಧಲಿಂಗ ಮಹಾಂತರ 24ನೇ ಸಂಸ್ಮರಣೋತ್ಸವ ನಿಮಿತ್ತ ಎಮ್ಮಿಗನೂರಿನ ಹಂಪಿಸಾವಿರದೇವರ ಮಠದಲ್ಲಿ ಆಯೋಜಿಸಿದ್ದ ರೈತ, ಸೈನಿಕ, ಮಠಾಧೀಶರ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಗುರುವಾರ ಮಾತನಾಡಿದರು.

ಕೃಷಿಕರಿಗೆ ರಸಗೊಬ್ಬರ, ಬಿತ್ತನೆಬೀಜ ಕೊಟ್ಟರೆ ಸಾಲದು, ಬೆಳೆಗೆ ಸಮರ್ಪಕ ಬೆಲೆ ಸಿಗಬೇಕಿದೆ. ರೈತರನ್ನು ಪೂಜ್ಯ ಭಾವನೆಯಿಂದ ಕಾಣುವುದರೊಂದಿಗೆ ಗೌರವ ಸಲ್ಲಿಸಬೇಕಿದೆ. ಬೆಳ್ಳಿ, ಬಂಗಾರದ ತಟ್ಟೆಗಳಿದ್ದರೂ ಉಣ್ಣಲು ಅನ್ನ ಬೇಕಿರುವುದರಿಂದ ರೈತರಿಗೆ ಗೌರವ ಸಲ್ಲಿಸಬೇಕಿದೆ. ಈ ದಿಸೆಯಲ್ಲಿ ಮಠದಿಂದ ತುಲಾಭಾರ ಸೇವೆ ಸಲ್ಲಿಸಿದೆ ಎಂದರು.

ಶಾಲಿಗನೂರಿನ ರೈತ ಶ್ರೀನಿವಾಸ ತಿಪ್ಪಣ್ಣ ವಡ್ಡರ, ಮಾಜಿ ಯೋಧ ಎಮ್ಮಿಗನೂರಿನ ಶೇಖ್‌ಸಾಬ್, ಚಿತ್ರಶೇಖರ ಶಿವಾಚಾರ್ಯರು, ಬೆಂಗಳೂರಿನ ವಿಮಲ ರೇಣುಕ ವೀರಮುಕ್ತಿ ಶಿವಾಚಾರ್ಯರು, ಉರುವಕೊಂಡದ ಡಾ.ಕರಿಬಸವರಾಜೇಂದ್ರ ಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯರಿಗೆ ತುಲಾಭಾರ ಮಾಡಲಾಯಿತು.

ಇದಕ್ಕೂ ಮುನ್ನಾ ಇಬ್ಬರು ಜಂಗಮವಟುಗಳಿಗೆ ಅಯ್ಯಚಾರ ದೀಕ್ಷೆ ನೀಡಲಾಯಿತು. ಶಿವಶಕ್ತಿ ಅಕ್ಕನ ಬಳಗಕ್ಕೆ ಚಾಲನೆ ನೀಡಲಾಯಿತು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ, ಪ್ರಮುಖರಾದ ಹರ್ಲಾಪುರದ ಮಲ್ಲಿಕಾರ್ಜುನ, ಮಸೀದಿಪುರದ ಚಂದ್ರಶೇಖರಗೌಡ, ಎಸ್.ಮಲ್ಲನಗೌಡ, ರಾಜಶೇಖರಗೌಡ, ಬಿ.ಸದಾಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net