

ಸಾಗರ: ಭಾರತೀಯ ಸಂಪ್ರದಾಯದಲ್ಲಿ ರಕ್ಷಾ ಬಂಧನ ಅತ್ಯಂತ ಪವಿತ್ರವಾದದ್ದು ಭ್ರಾತೃತ್ವದ ಮಹತ್ವ ಸಾರುವ ರಕ್ಷಾ ಬಂಧನ ಆಚರಣೆ ಮೂಲಕ ಸೌಹಾರ್ದತೆ ಬೆಸೆಯಲು ಸಾಧ್ಯವಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ತಾಲೂಕಿನ ಕೆಳದಿಯಲ್ಲಿ ಗ್ರಾಪಂ, ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾ ರಕ್ಷಾ ಬಂಧನ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಹಾಗೂ ರೈತ ಮೋರ್ಚಾದಿಂದ ಹರ್ ಘರ್ ತಿರಂಗಾ ಅಭಿಯಾನದಡಿ ಏರ್ಪಡಿಸಿದ್ದ ಟ್ರ್ಯಾಕ್ಟರ್ ರ‌್ಯಾಲಿಯನ್ನು ಕೆಳದಿ ರಾಣಿ ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೆಳದಿ ರಾಣಿ ಚೆನ್ನಮ್ಮಾಜಿ 25ವರ್ಷಕ್ಕೂ ಹೆಚ್ಚು ಕಾಲ ರಾಜ್ಯಾಡಳಿತ ನಡೆಸಿ ಮಹಿಳೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ ದಿಟ್ಟ ಮಹಿಳೆ. ಶಿವಾಜಿ ಪುತ್ರ ರಾಜಾರಾಮನಿಗೆ ಆಶ್ರಯ ನೀಡಿ ಸಾಮರಸ್ಯ ಮೆರೆದ ಧೀರ ಮಹಿಳೆ ಕೆಳದಿ ರಾಣಿ ಚೆನ್ನಮ್ಮಾಜಿ ಎಂಬುದು ದಾಖಲಾರ್ಹ. ಅಂತಹ ವೀರಮಹಿಳೆಯನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಹರ್ ಘರ್ ತಿರಂಗಾ ನಗರಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದಲ್ಲಿ ರೈತರು ಅತ್ಯಂತ ಶ್ರದ್ಧೆಯಿಂದ ಆಚರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆದಿದ್ದಾರೆ. ಟ್ರ್ಯಾಕ್ಟರ್ ರ‌್ಯಾಲಿ ಮೂಲಕ ಗ್ರಾಮೀಣ ಭಾಗದಲ್ಲಿ ರಾಷ್ಟ್ರಧ್ವಜದ ಮಹತ್ವ ಸಾರುವ ಕೆಲಸವನ್ನು ರೈತರ ಮೋರ್ಚಾ ಮಾಡಿದ್ದು ಸ್ಮರಣೀಯ ಎಂದು ತಿಳಿಸಿದರು.