ರೈತರನ್ನು ಒಕ್ಕಲೆಬ್ಬಿಸಿದರೆ ತಕ್ಕಪಾಠ

19_09_Mdy_07(Raytha Samavesha)
Published on

ಮಂಡ್ಯ: ಡಬಲ್ ಇಂಜಿನ್ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.


ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ರೈತ ಸಂಘದಿಂದ ಸೋಮವಾರ ಆಯೋಜಿಸಿದ್ದ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿ, ವಿದ್ಯುತ್ ಉತ್ಪಾದನೆ, ಸಂಪರ್ಕ ಹಾಗೂ ನಿರ್ವಹಣಾ ಹೊಣೆಗಳನ್ನು ಅದಾನಿ, ಅಂಬಾನಿಗೆ ಕೊಡಲು ಮುಂದಾಗಿರುವ ಈ ಸರ್ಕಾರದಿಂದ ರೈತರು ಯಾವ ಸೌಲಭ್ಯವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ.

1983ರಲ್ಲಿ ಗೂಂಡೂರಾವ್ ಅವರೊಂದಿಗೆ ರೈತ ಮುಖಂಡರಾದ ಎಂ.ಡಿ.ಸುಂದರೇಶ್ ಹಾಗೂ ನಂಜುಂಡಸ್ವಾಮಿ ಅವರು ಮಾತನಾಡಿದ ಪರಿಣಾಮ 5 ಎಚ್‌ಪಿ ವರೆಗೆ ಉಚಿತ ವಿದ್ಯುತ್ ನೀಡಲು ಒಪ್ಪಿದ್ದರು. ನಂತರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ನಡೆದ ಹೋರಾಟದಿಂದ 10 ಎಚ್‌ಪಿವರೆಗಿನ ಬಳಕೆಗೆ ಅವಕಾಶ ಸಿಕ್ಕಿತ್ತು. ಆದರೆ ಇದೀಗ ಸರ್ಕಾರ ರೈತರ ಮೇಲೆ ಬರೆ ಎಳೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜು.11ರಂದು ನಾವು ಪ್ರತಿಭಟನೆ ನಡೆಸಿದ ವೇಳೆ ಮಾತುಕತೆಗೆ ಬನ್ನಿ, ನಿಮ್ಮೆಲ್ಲ ಸಮಸ್ಯೆಗಳನ್ನೂ ಬಗೆಹರಿಸುತ್ತೇವೆಂದು ವಾರದ ಗಡುವು ನೀಡಿದ್ದರು. ನಾವು ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಾಗ ಆತ್ಮೀಯತೆಯಿಂದ ಸ್ಪಂದಿಸಿ, ಈಗ ಒಂದೂವರೆ ತಿಂಗಳಾದರೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಇದು ಡಬಲ್ ಇಂಜಿನ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಸಾಕ್ಷಿ. ಈಗಾಗಲೇ ಭೂಸುಧಾರಣಾ ಕಾಯ್ದೆಗೆ ತಂದ ತಿದ್ದುಪಡಿಗಳಿಂದಾಗಿ ಶೇ.47ರಷ್ಟು ಕೃಷಿ ಭೂಮಿ ಮಾರಾಟ ಹೆಚ್ಚಳವಾಗಿದೆ. ಬಡ ರೈತರು, ಸಣ್ಣ ಹಿಡುವಳಿದಾರರು ಕೃಷಿ ಭೂಮಿಯನ್ನು ಬಿಡಿಗಾಸಿಗೆ ಮಾರಾಟ ಮಾಡಿಕೊಂಡು ನೆಲೆ ಕಳೆದುಕೊಳ್ಳುತ್ತಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.


ನಾವು ಗಣಿ ನಿಷೇಧ ಮಾಡಿ ಕೆಆರ್‌ಎಸ್ ಡ್ಯಾಂ ಉಳಿಸಿ ಸಂರಕ್ಷಿಸಬೇಕೆಂಬ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಿದ್ದೇವೆ. ಇತ್ತೀಚೆಗೆ ಪರೀಕ್ಷಾರ್ಥ ಸ್ಫೋಟ ನಡೆಸಲು ಬಂದ ತಂಡವನ್ನು ವಾಪಸ್ ಕಳುಹಿಸಿದ್ದೆವು. ಆದರೆ, ಅಲ್ಲಿನ ಶಾಸಕರು ಗೂಂಡಾ ವರ್ತನೆ ತೋರುತ್ತಿದ್ದಾರೆ. ಅಕ್ರಮ ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ತಡೆಹಿಡಿದಿದ್ದ ಗಣಿ ಅಧಿಕಾರಿಗಳ ಮೇಲೆ ಗೂಂಡಾ ವರ್ತನೆ ತೋರಿ ಲಾರಿಗಳನ್ನು ಬಿಡಿಸಿ ಕಳುಹಿಸಿದ್ದಾರೆ. ಮುಂದೆ ಮಂಡ್ಯದಲ್ಲಿ ಇಂತಹ ಗೂಂಡಾಗಿರಿ ರಾಜಕಾರಣಕ್ಕೆ ಅವಕಾಶ ಕೊಡದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.


ಇನ್ನು ಮುಂದೆ ಜಿಲ್ಲೆಯಲ್ಲಿ ಯುವ ಶಕ್ತಿ ಉದಯಿಸುವ ಎಲ್ಲ ಲಕ್ಷಣಗಳಿದ್ದು, ರೈತ ಸಂಘದಿಂದ ದರ್ಶನ್ ಪುಟ್ಟಣ್ಣಯ್ಯ, ಎಸ್.ಸಿ.ಮಧುಚಂದನ್, ಪ್ರಸನ್ನ ಎನ್.ಗೌಡ ಅವರಂತಹ ಯುವ ನಾಯಕರ ನಾಯಕತ್ವ ಹೊಸ ನಡೆ ನುಡಿಯ ರಾಜಕಾರಣವನ್ನು ಹುಟ್ಟುಹಾಕಲಿದೆ. ಅತ್ಯಮೂಲ್ಯ ಉದ್ದೇಶದಿಂದ ರೂಪಿತವಾದ ಹಸಿರು ಟವಲನ್ನು ಕೆಲವು ಡೀಲ್‌ಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ತಿಲಾಂಜಲಿ ಹಾಡಬೇಕಿದೆ. ಹಿರಿಯರ ತ್ಯಾಗ, ಬಲಿದಾನಕ್ಕೆ ಅಪಚಾರವಾಗಬಾರದು. ಹಾಗಾಗಿ, ಮಂಡ್ಯದಲ್ಲಿ ರೈತರ ರಾಜಕಾರಣಕ್ಕೆ ಇರುವ ಅವಕಾಶ ಮತ್ತೆಲ್ಲೂ ಇಲ್ಲದಾಗಿದ್ದು, ಜಿಲ್ಲೆಯ ಕನಿಷ್ಠ ನಾಲ್ಕೈದು ಕ್ಷೇತ್ರಗಳಲ್ಲಾದರೂ ಹಸಿರು ಶಕ್ತಿ, ಯುವ ನಾಯಕತ್ವ ವಿಜೃಂಭಿಸಬೇಕೆಂದು ಕರೆ ನೀಡಿದರು.


ಸಮಾವೇಶ ಉದ್ಘಾಟಿಸಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಜನರನ್ನು ನಿರಂತರವಾಗಿ ವಂಚಿಸುತ್ತ ಬಂದಿದ್ದಾರೆ. ಅಧಿಕಾರಕ್ಕೆ ಬರುತ್ತಲೇ ರೈತರ ಸಾಲ ಮನ್ನಾ ಮಾಡುತ್ತೇನೆಂದು ಘಂಟಾಘೋಷವಾಗಿ ಹೇಳಿ ಎಂಟು ವರ್ಷ ಕಳೆದಿದೆ. ಆದರೆ, ಅವರು ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳಿಗೆ ಕೊಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಕೃಷಿಗೆ ಬೇಕಾದ ವಸ್ತುಗಳು ದುಬಾರಿಯಾಗಿದ್ದರೂ, ಅಕ್ಕಿ, ಪುರಿ ಮೇಲೂ ಜಿಎಸ್‌ಟಿ ಹಾಕಿ ರೈತರನ್ನು ಸತಾಯಿಸುತ್ತಿದ್ದಾರೆ. ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಪ್ರಯತ್ನ ಮಾಡಿದರೆ ನಾವು ಮೀಟರ್‌ಗಳನ್ನು ಕಿತ್ತು ಕೆಆರ್‌ಎಸ್ ಡ್ಯಾಂಗೆ ಬಿಸಾಡುತ್ತೇವೆ ಎಂದು ಎಚ್ಚರಿಸಿದರು.


ರೈತ ಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಸಮಾವೇಶದಲ್ಲಿ ರೈತ ಕಾರ್ಯಕರ್ತರ ಒಗ್ಗಟ್ಟು ನೋಡಿ ನನಗೆ ಮನ ತುಂಬಿ ಬಂದಿದೆ. ರೈತರು ಹಸಿರು ಟವಲ್ ಬೀಸುತ್ತಿದ್ದರೆ ನಮ್ಮವರು(ಕೆ.ಎಸ್.ಪುಟ್ಟಣ್ಣಯ್ಯ) ಇಲ್ಲೇ ಎಲ್ಲೋ ಇದ್ದಾರೆಂಬ ಭಾವನೆ ಮೂಡುತ್ತಿದೆ ಎಂದು ಭಾವುಕರಾದರು.


ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಮುಖಂಡರಾದ ನಂದಿನಿ ಜಯರಾಂ, ವೀರಸಂಗಯ್ಯ, ಮಲೇನೂರು ಶಂಕರಪ್ಪ, ಲಿಂಗಪ್ಪಾಜಿ, ಪ್ರಸನ್ನ ಎನ್.ಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟೀಲ್, ಗೋವಿಂದರಾಜು, ಕೆ.ಆರ್.ರವೀಂದ್ರ, ಕೆ.ಆರ್.ಜಯರಾಂ, ಹೆಬ್ಬಸೂರು ಬಸವಣ್ಣ, ಮಂಜುಳಾ ಅಕ್ಕಿ, ರಘು ಹಿರಿಸಾವೆ, ಚಿಕ್ಕಾಡೆ ಹರೀಶ್, ಮುನಿರಾಜು, ಮಂಜುನಾಥಗೌಡ ಇತರರಿದ್ದರು.


ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸರ್ ಎಂವಿ ಪ್ರತಿಮೆ ಬಳಿಯಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೆ ಮೆರವಣಿಗೆ ನಡೆಯಿತು. ಈ ವೇಳೆ ಜಾನಪದ ಕಲಾ ತಂಡಗಳು ಸಾಥ್ ನೀಡಿದವು. ರೈತ ಸಂಘದಿಂದ ಹೊರತಂದಿರುವ ‘ಮೀಟರ್ ಅಳವಡಿಕೆ ಹೊರೆ, ರೈತರಿಗೆ ಬರೆ’ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net