ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜಗನ್ನಾಥ್ ಪಟ್ಟು

Untitled-2
Published on

ದೇವನಹಳ್ಳಿ: ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ದೇಶ ಮತ್ತು ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತ ನಡೆಸಲಿ ಮೊದಲು ರೈತರ ಅಭ್ಯುದಯದತ್ತ ಗಮನ ಹರಿಸಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶ್ವಚೇತನ ರೈತನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶನಿವಾರ ಹಮ್ಮಿಕೊಂಡಿದ್ದ ನಂಜುಂಡಸ್ವಾಮಿ ಅವರ 55ನೇ ಜನ್ಮ ದಿನಾಚರಣೆ ಮತ್ತು 17ನೇ ಪುಣ್ಯಸ್ಮರಣಾ ಕಾರ್ಯಕ್ರದಲ್ಲಿ ಮಾತನಾಡಿದರು.

ರೈತ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಆದರೆ ಸರ್ಕಾರಕ್ಕೆ ರೈತರ ಬಗ್ಗೆ ಕನಿಷ್ಠ ಜ್ಞಾನ ಇಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ನಂಜುಂಡಸ್ವಾಮಿ ಪುತ್ರ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ರೈತ ಸಂಘಟನೆಯಲ್ಲಿ ಎಷ್ಟು ಸಾವಿರ ಜನರಿದ್ದಾರೆ ಎಂಬುದು ಮುಖ್ಯವಲ್ಲ. ನಾಡಿನ ರೈತರ ನಾಡಿಮಿಡಿತ ಅರಿತು ರೈತ ಸಮಸ್ಯೆ ಬಗ್ಗೆ ಗಟ್ಟಿ ಧ್ವನಿ ಮಾಡುವವರು, ನಿರ್ದಿಷ್ಟ ಗುರಿಯೊಂದಿಗೆ ರೈತ ಚಳವಳಿಯ ಪ್ರಾಮಾಣಿಕ ಹೋರಾಟ ಸ್ವಾರ್ಥ ರಹಿತವಾಗಿ ಮಾಡಬೇಕು ಎಂದರು.

ಕರವೇ ಕನ್ನಡಿಗರ ಸಾರಥ್ಯದ ಅಧ್ಯಕ್ಷ ಅಗಲಗುರ್ಕಿ ಚಲಪತಿ ಮಾತನಾಡಿ, ನಮ್ಮ ಹಕ್ಕುಗಳನ್ನು ಮಾರಿಕೊಳ್ಳಬಾರದು. ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿದು ಅಂತರ್ಜಲ ವೃದ್ದಿಯಾಗಿದ್ದರೆ ಅದಕ್ಕೆ ನಮ್ಮ ಸಂಘಟನೆಗಳ ಹೋರಾಟ, ಜೈಲುವಾಸ ಎಲ್ಲವನ್ನು ಅನುಭವಿಸಿದ ಪ್ರತಿಲ. ಇದಕ್ಕೆ ನಂಜುಂಡಸ್ವಾಮಿ ಅವರ ಚಳವಳಿಯ ಹಾದಿಯೇ ಸ್ಫೂರ್ತಿ ಎಂದರು.

ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಮಾತನಾಡಿ, ರೈತ ಪರ ಸಂಘಟನೆಗಳು ಹಲವು ಗುಂಪುಗಳಾಗಿ ವಿಂಗಡಣೆಯಾಗಿರಬಹುದು. ಆದರೆ ಎಲ್ಲರ ಸಿದ್ಧಾಂತ ಒಂದೇ. ಎಲ್ಲ ಗುಂಪುಗಳಿಗೂ ದಿವಂಗತ ಎಂ.ಡಿ ನಂಜುಂಡಸ್ವಾಮಿ ಅವರೇ ನಾಯಕ. ದ್ವೇಷಕ್ಕಾಗಿ ಸಂಘಟನೆ ಕಟ್ಟಬಾರದು. ರೈತ ಹೋರಾಟದಲ್ಲಿ ಸ್ಪಷ್ಟತೆ ಇರಬೇಕು ಎಂದರು.

ಕಾರ್ಯಕ್ರಮದ ನಂತರ ಸಾರ್ವಜನಿಕ ಆಸ್ಪತ್ರೆ ಹಾಗೂ ಅಂಗವಿಕಲರ ಅಭಿವೃದ್ಧಿ ಫೌಂಡೇಷನ್‌ನಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.

ರಾಜ್ಯ ಉಪಾಧ್ಯಕ್ಷ ಡಾ.ಮಂಜುನಾಥ್, ಜಿಲ್ಲಾ ಕರವೇ ಗೌರವ ಅಧ್ಯಕ್ಷ ಎನ್.ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ವಿನೋದಕುಮಾರಗೌಡ, ತಾಪಂ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಎಂ. ವೆಂಕಟೇಶ್, ಉಪಾಧ್ಯಕ್ಷ ಎ.ಎಂ.ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಜಯಶಂಕರ್, ಉಪಾಧ್ಯಕ್ಷ ಗಯಾಜ್, ಮಹಿಳಾ ಜಿಲ್ಲಾ ಅಧ್ಯಕ್ಷೆ ರೇಣುಕಮ್ಮ, ತಾಲೂಕು ಅಧ್ಯಕ್ಷೆ ಚೈತ್ರಾ ನಾಗರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net