

ಮೈಸೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಪುರಭವನ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ರೈತ ವಿರೋಧಿ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ದೇಶದ ಸಮಸ್ತ ರೈತ ವರ್ಗ ಕರೆ ಕೊಟ್ಟಿದ್ದ ದೆಹಲಿ ಚಲೋ ಜಾಥಾದಲ್ಲಿ ಭಾಗವಹಿಸಲು ಹೊರಟಿದ್ದ ಪಂಜಾಬ್, ಹರಿಯಾಣ ರೈತರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ದೂರಿದರು.
ರೈತರಿಗೆ ಸಂಬಂಧಿಸಿದ ಕಾನೂನು ಜಾರಿ ಮಾಡುವಾಗ ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಸಂವಿಧಾನದ ಪ್ರಕಾರ ಇದು ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ನಿರ್ಧಾರವನ್ನು ಆಯಾ ರಾಜ್ಯಗಳ ವಿವೇಚನೆಗೆ ಬಿಡಬೇಕು. ಆದರೆ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲು ಹೊರಟಿದೆ ಎಂದು ಆರೋಪಿಸಿದರು.
ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈಹಾಕಿದೆ. ಇದರಿಂದ ರೈತರಿಗೆ ಭಾರಿ ಅನ್ಯಾಯವಾಗುತ್ತದೆ. ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಮುಖಂಡರಾದ ಎಚ್.ಬಿ.ರಾಮಕೃಷ್ಣ, ಎಚ್.ಆರ್.ಶೇಷಾದ್ರಿ, ಕೆ.ಜೆ.ಸೋಮರಾಜೇ ಅರಸ್, ಡಿ.ಜಗನ್ನಾಥ್ ಇತರರಿದ್ದರು.