

ಚಿಕ್ಕಬಳ್ಳಾಪುರ: ದೆಹಲಿ ಚಲೋ ರೈತರ ಹೋರಾಟ ಬೆಂಬಲಿಸಿ ಶುಕ್ರವಾರ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ), ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸಂಚಾರ ತಡೆದು ಪ್ರತಿಭಟಿಸಿದರು.
ಬೈಪಾಸ್‌ನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ತಡೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.
ರೈತರು ನಿರಂತರ ಹೋರಾಟದ ಮೂಲಕ ಸಮಸ್ಯೆಗಳನ್ನು ಗಮನಕ್ಕೆ ತಂದರೂ ಸರ್ಕಾರ ಕಿವಿಗೊಡುತ್ತಿಲ್ಲ. ಪ್ರತಿಭಟನೆ ತಡೆಯಲು, ಸಂಘಟನೆಗಳ ಒಗ್ಗಟ್ಟು ಮುರಿಯಲು ಹುನ್ನಾರ ನಡೆಸುತ್ತಿದೆ ಎಂದು ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಟೀಕಿಸಿದರು.
ಎಪಿಎಂಸಿ, ಭೂ ಸುಧಾರಣೆ, ಬಿತ್ತನೆ ಬೀಜ ಮಾರಾಟ, ಕಾರ್ಮಿಕ ಕಾಯ್ದೆ ಸೇರಿ ಹಲವು ಕಾಯ್ದೆಗಳ ಮಾರಕ ತಿದ್ದುಪಡಿಯ ಧೋರಣೆ ಬಿಡಬೇಕು. ಕಾರ್ಪೋರೇಟ್ ಕಂಪನಿಗಳ ಬದಲಿಗೆ ಮೊದಲು ರೈತರು, ಕಾರ್ಮಿಕ, ಬಡ ಮತ್ತು ಮಧ್ಯಮ ವರ್ಗದ ಜನರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ, ಗೌರವಾಧ್ಯಕ್ಷ ಎ.ವಿ.ವೆಂಕಟರಾಮಯ್ಯ, ಕಾರ್ಯದರ್ಶಿ ರೆಡ್ಡಪ್ಪ, ಸಂಚಾಲಕರಾದ ರಾಮಾಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.