ಮೈಸೂರು: ರೈತರ ಹಿತರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಹಾಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಜೆ.ಎಸ್. ರಮೇಶ್‌ಕುಮಾರ್ ಹೇಳಿದರು.
ರೈತರ ಆದಾಯ ದ್ವಿಗುಣಗೊಳಿಸಲು ಪ್ರತಿ ತಾಲೂಕಿನಲ್ಲಿಯೂ ರೈತ ಉತ್ಪಾದಕರ ಕಂಪನಿಗಳನ್ನು ತೆರೆಯಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹಣ ಬಿಡುಗಡೆಗೊಳಿಸಲಾಗುತ್ತಿರುವುದಲ್ಲದೆ, ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಗಳ ಮರು ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಮರು ಆರಂಭದಿಂದಾಗಿ ಆ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಿದೆ. ಎಫ್‌ಆರ್‌ಪಿಗಿಂತ ಹೆಚ್ಚುವರಿ ಕಬ್ಬಿನ ದರ ನಿಗದಿಪಡಿಸುವ ಸಲುವಾಗಿ ಸಾಧಕ-ಬಾಧಕ ಪರಿಗಣಿಸಲು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕ ಶಿವಾನಂದ ಎಚ್. ಕಲಕೇರಿ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ನೇಮಕ ಮಾಡಲಾಗಿತ್ತು. ಅದರ ಶಿಫಾರಸಿನಂತೆ ಎಫ್‌ಆರ್‌ಪಿ ಜತೆಗೆ ಹೆಚ್ಚುವರಿ 50 ರೂ. ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದರು.
ರೈತರ ಪಂಪ್‌ಸೆಟ್‌ಗಳಲ್ಲಿ ಎಷ್ಟು ವಿದ್ಯುತ್ ಬಳಕೆಯಾಗುತ್ತಿದೆ ಎಂಬುದನ್ನು ತಿಳಿಯಲಷ್ಟೇ ಮೀಟರ್ ಅಳವಡಿಸಲಾಗುತ್ತಿದೆಯೇ ಹೊರತು ಬಿಲ್ ಪಾವತಿಸುವಂತೆ ಕೇಳಿಲ್ಲ. ಹಾಗಾಗಿ ರೈತರು ಆತಂತಕ್ಕೀಡಾಗಬಾರದು ಎಂದು ಹೇಳಿದರು.
ಪದಾಧಿಕಾರಿಗಳಾದ ದೇವರಾಜ್, ಎಂ.ಎಸ್. ಮಂಜುನಾಥ್, ಮಧು ಎಸ್. ಪೂಜಾರ್ ಹಾಜರಿದ್ದರು.