

ಹಾಸನ: ರಾಜ್ಯ ಸರ್ಕಾರ ಆಂತರಿಕ ಕಚ್ಚಾಟದಿಂದ ಕಾಲಹರಣ ಮಾಡಲಾಗುತ್ತಿದೆ. ಬರಗಾಲದ ಸಂದರ್ಭದಲ್ಲೂ ಕೂಡ ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಿದ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸುವ ಬದಲು ರಾಜ್ಯದ ಎಲ್ಲಾ ಸಂಸದರ ಜತೆ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಸೌಜನ್ಯವಿಲ್ಲ ಎಂದು ಕಿಡಿಕಾರಿದರು.
ರೈತರು ಬೀದಿಗಿಳಿದು ಪ್ರತಿಭಟನೆ ಮಾಡುವ ಮೊದಲು ಎಚ್ಚೆತ್ತುಕೊಂಡು ಮುಖ್ಯಮಂತ್ರಿಗಳು ತಕ್ಷಣವೇ ಸರ್ವ ಪಕ್ಷ ನಿಯೋಗ ಕರೆದುಕೊಂಡು ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಬೇಕು. ನಾವು ಕೂಡ ರಾಜ್ಯದ ಪರವಾಗಿ ನಿಂತು ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಸಕಲೇಶಪುರದಲ್ಲಿಯೂ ಆಗಸ್ಟ್ ತಿಂಗಳಿನಲ್ಲಿ ಶೇ.73ರಷ್ಟು ಮಳೆ ಕೂರತೆ ಉಂಟಾಗಿದೆ. 125 ವರ್ಷಗಳ ನಂತರ ಈ ರೀತಿಯ ಬರಗಾಲ ಸೃಷ್ಟಿಯಾಗಿದೆ. ಆದರೆ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೇವಲ ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ಹೇಳಿದರು.
ನಾನು ಜಿಲ್ಲೆಯ ಹಲವು ಭಾಗಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿಯನ್ನು ಪರಿಶೀಲಿಸಲಿದ್ದೇನೆ. ಜೋಳ, ರಾಗಿ, ತೆಂಗು ಬೆಳೆಗಳು ನಷ್ಟವಾಗಿದೆ. ಶೇ. 85 ರಿಂದ 90 ರಷ್ಟು ಬೆಳೆ ಹಾನಿ ಉಂಟಾಗಿದೆ. ಜಿಲ್ಲಾಧಿಕಾರಿಗೆ 12 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡದೇ ಮಾರ್ಗಸೂಚಿಗಾಗಿ ಕಾಯುತ್ತಿದ್ದಾರೆ. ಈ ರೀತಿ ಆದರೆ ಜನರ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ. ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ಎದುರಾಗುತ್ತಿದ್ದರೂ ಕೂಡ ಸರ್ಕಾರ ದಿವ್ಯ ನಿರ್ಲಕ್ಷೃ ವಹಿಸಿದೆ ಎಂದು ದೂರಿದರು.
ನಾನು ಸಂತೃಪ್ತಿ ರಾಜಕಾರಣಿ:
ರಾಜ್ಯದಲ್ಲಿ ಯಡಿಯೂರಪ್ಪ ಬಿಟ್ಟರೆ ನಂತರ ನಾನೇ ಅತಿ ಹೆಚ್ಚು ಅಧಿಕಾರ ಅನುಭವಿಸಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ. ಶಾಸಕ, ಮಂತ್ರಿ, ಮುಖ್ಯಮಂತ್ರಿ, ಅಧ್ಯಕ್ಷ, ಸಂಸದ ಹಾಗೂ ಕೇಂದ್ರದ ಮಂತ್ರಿಯಾಗಿಯೂ ಕೂಡ ಕೆಲಸ ಮಾಡಿದ್ದೇನೆ. ಇಷ್ಟು ಅಧಿಕಾರ ಸಿಕ್ಕಿರುವುದರಿಂದ ನಾನು ಸಂತೃಪ್ತನಾಗಿದ್ದೇನೆ. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ ಎಂದು ಡಿವಿಎಸ್ ಹೇಳಿದರು.
ಇಂತಹ ಕೆಟ್ಟ ವ್ಯವಸ್ಥೆ ನೋಡಿಲ್ಲ:
ನಾನು ರಾಜಕಾರಣಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಂತಹ ಕೆಟ್ಟ ವ್ಯವಸ್ಥೆಯನ್ನು ನಾನು ನೋಡಿಲ್ಲ. ಅವರು ಅಧಿಕಾರಕ್ಕೆ ಬಂದು ಮೂರು ನಾಲ್ಕು ತಿಂಗಳು ಕಳೆದಿವೆ. ಆಗಲೇ ಆಂತರಿಕ ಕಚ್ಚಾಟ, ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಕೂಡ ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಿಂದ ಕೇಂದ್ರಕ್ಕೆ ವರದಿ:
ಬರಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ ಪಕ್ಷದ ವತಿಯಿಂದ 14 ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ರಾಜ್ಯದ ವಸ್ತು ಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿವೆ. ಈ ವರದಿಯನ್ನು ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರಕ್ಕೆ ಸಲ್ಲಿಸಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡಿ ರಾಜ್ಯಕ್ಕೆ ಬೇಕಾಗಿರುವಂತಹ ಅಗತ್ಯ ನೆರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಬಿಜೆಪಿ ನಾಯಕರು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಿಎಂ ಮಾತಿಗೂ ಕಿಮ್ಮತ್ತಿಲ್ಲ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅಧಿಕಾರಿಗಳಿಗೆ ತಕ್ಷಣವೇ ರೈತರಿಗೆ ಪ್ರತಿದಿನ 7ಗಂಟೆ ವಿದ್ಯುತ್ ನೀಡುವಂತೆ ಆದೇಶ ನೀಡಿದ್ದರೂ ಕೂಡ, ಅವರ ಮಾತಿಗೆ ಕಿಮ್ಮತ್ತಿಲ್ಲದಂತೆ ಅಧಿಕಾರಿಗಳು ಕೇವಲ ಒಂದೆರಡು ಗಂಟೆ ನೀಡುತ್ತಿದ್ದಾರೆ. ಹೀಗಾದರೆ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಡಿವಿಎಸ್ ಅಸಮಾಧಾನ ವ್ಯಕ್ತಪಡಿಸಿದರು.
ಮೈತ್ರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಿ:
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನೊಂದಿಗೆ ನೇರ ಹೋರಾಟ ಮಾಡಿಕೊಂಡು ಬಂದಿರುವ ಬಿಜೆಪಿಯ ಕಾರ್ಯಕರ್ತರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಆದ್ದರಿಂದ ಕೇಂದ್ರದ ನಾಯಕರು ಜೆಡಿಎಸ್ ಮೈತ್ರಿಯ ಮಾರ್ಗಸೂಚಿ ಬಿಡುಗಡೆ ಮಾಡಿ, ಇಬ್ಬರು ನಾಯಕರು ಕುಳಿತುಕೊಂಡು ಸಮಸ್ಯೆ ಬಗೆಹರಿಸಿರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರದ ನಾಯಕರಿಗೂ ಕೂಡ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ಶೀಘ್ರದಲ್ಲೇ ನೇಮಕ:
ವಿಧಾನಸಭಾ ಚುನಾವಣೆ ಮುಗಿದ ಮೇಲೆ ಕೆಲ ಗೊಂದಲದಿಂದಾಗಿ ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷ ಸ್ಥಾನವನ್ನ ನೇಮಕ ಮಾಡಿಲ್ಲ ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣವೇ ಶೀಘ್ರದಲ್ಲಿ ಎರಡು ಸ್ಥಾನಗಳನ್ನು ನಮ್ಮ ನಾಯಕರು ಭರ್ತಿ ಮಾಡುವ ವಿಶ್ವಾಸವಿದೆ ಈಗಾಗಲೇ ಇದರ ಬಗ್ಗೆ ಎಲ್ಲರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.