ರೈತರ ಹಿತ ಕಾಪಾಡಲು ಸರ್ಕಾರ ಬದ್ಧ

11-08kod01
ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಚನ್ನಾರಡ್ಡಿ ಪಾಟೀಲ್ ತನ್ನೂರ, ಡಿಸಿ ಡಾ.ಸುಶೀಲಾ ಬಿ., ಸಿಇ ಆರ್.ಮಂಜುನಾಥ, ಇಇ ಎಂ.ಪ್ರಕಾಶ, ರಾಜಾ ವೇಣುಗೋಪಾಲ ನಾಯಕ, ರಾಜಾ ಸಂತೋಷ ನಾಯಕ ಇತರರಿದ್ದರು.
Published on

ಕೊಡೇಕಲ್: ಬಸವಸಾಗರ ಜಲಾಶಯದಿಂದ ನಾಲ್ಕು ಜಿಲ್ಲೆಗಳ ಲಕ್ಷಾಂತರ ರೈತರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯಕ್ಕೆ ತೆರಳಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಅವರು, ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ಜಲಾಶಯ ಬರಿದಾಗುವ ಮೂಲಕ ಆತಂಕ ಸೃಷ್ಟಿಸಿತ್ತು. ಆದರೆ ದೇವರ ದಯೆಯಿಂದ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿ ಕೃಷ್ಣೆ ಎಲ್ಲರ ಆತಂಕ ದೂರ ಮಾಡಿದ್ದಾಳೆ. ಜಲಾಶಯದಲ್ಲಿ ೩೨.೮೪ ಟಿಎಂಸಿ ನೀರು ಸಂಗ್ರಹವಿದ್ದು, ಕಾಲುವೆಗಳಿಗೆ ಹರಿಸಲಾಗುತ್ತಿದೆ ಎಂದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕರ್ನಾಳ ಏತ ನೀರಾವರಿ ಯೋಜನೆಗೆ ಶೀಘ್ರವೇ ಅನುಮೋದನೆ ಸಿಗಲಿದೆ. ರೈತರು ನೀರಿನ ಮಿತ ಬಳಕೆಗೆ ಒತ್ತು ನೀಡುವುದರ ಜತೆಗೆ ವೈಜ್ಞಾನಿಕ ಕೃಷಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಚನ್ನಾರಡ್ಡಿ ಪಾಟೀಲ್ ತನ್ನೂರ ಮಾತನಾಡಿ, ನಮ್ಮಲ್ಲಿ ಮಳೆಯಾಗದಿದ್ದರೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿದ ಮಳೆಯಿಂದ ಬಸವಸಾಗರ ಜಲಾಶಯ ತುಂಬಿ ಲಕ್ಷಾಂತರ ರೈತರ ಬದುಕನ್ನು ಬಂಗಾರವಾಗಿಸಿದೆ ಎಂದರು.

ಜಿಲ್ಲಾಧಿಕಾರಿ ಸುಶೀಲಾ ಬಿ., ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಆರ್.ಮಂಜುನಾಥ, ಇಇ ಎಂ.ಪ್ರಕಾಶ, ಪ್ರಮುಖರಾದ ರಾಜಾ ವೇಣುಗೋಪಾಲ ನಾಯಕ, ರಾಜಾ ಸಂತೋಷ ನಾಯಕ, ಶಂಕ್ರಣ್ಣ ವಣಿಕ್ಯಾಳ, ವಿಠ್ಠಲ್ ಯಾದವ್, ವೆಂಕೋಬ ಯಾದವ್ ಸಾಹುಕಾರ, ರಾಜಶೇಖರಗೌಡ ಪಾಟೀಲ್ ವಜ್ಜಲ್, ಎಇಇ ಪ್ರಭಾಕರ, ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯಂ, ಚಂದ್ರಶೇಖರ ದಂಡಿನ್, ಸಿದ್ದಣ್ಣ ಮಲಗಲದಿನ್ನಿ, ಆರ್.ಎ. ರೇವಡಿ, ಮಲ್ಲಣ್ಣ ಸಾಹುಕಾರ, ಗುಂಡಪ್ಪ ಸೊಲ್ಲಾಪುರ, ನಿಂಗರಾಜ ಬಾಚಿಮಟ್ಟಿ ಇತರರಿದ್ದರು.

ಡಿವೈಎಸ್‌ಪಿ ಜಾವೇದ್ ಮಾರ್ಗದರ್ಶನದಲ್ಲಿ ಕೊಡೇಕಲ್ ಠಾಣಾಧಿಕಾರಿ ಸುರೇಶ ಬಾವಿಮನಿ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು. ಸಚಿವರ ನಂತರ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಚನ್ನಾರಡ್ಡಿ ಪಾಟೀಲ್ ತನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಮುಖ್ಯ ಅಭಿಯಂತರ ಮಂಜುನಾಥ ಬಾಗಿನ ಅರ್ಪಿಸಿದರು.

ಜಲಾಶಯಕ್ಕೆ ಭೇಟಿ ನೀಡಿದ ಸಚಿವ-ಶಾಸಕರನ್ನು ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಅದ್ದೂರಿ ಸ್ವಾಗತ ಕೋರಿದರು. ರಾಘವೇಂದ್ರ ಸ್ವಾಮಿ ಮಠದ ಅರ್ಚಕ ರಾಘವೇಂದ್ರಾಚಾರ್ಯ ಜೋಶಿ ಅವರಿಂದ ವಿಶೇಷ ಪೂಜೆ ಜರುಗಿತು.

ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸವಸಾಗರ ಜಲಾಶಯ ಎದುರು ಆಲಮಟ್ಟಿ ಮಾದರಿಯಲ್ಲಿ ಉದ್ಯಾನವನ ನಿರ್ಮಿಸುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಲಾಗುವುದು.
| ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net