

ಹಾವೇರಿ: ರೈತರ ಮಕ್ಕಳಿಗೆ ನೂತನವಾಗಿ ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಪದವಿ ಕಾಲೇಜ್ಗಳಲ್ಲಿ ಶೇ. 50ರಷ್ಟು ಸೀಟನ್ನು ರೈತರ ಮಕ್ಕಳಿಗೆ ಕಾಯ್ದಿರಿಸಿ ಆದೇಶ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಹನುಮನಮಟ್ಟಿ ಕೃಷಿ ಪ್ರಾದೇಶಿಕ ಕೇಂದ್ರದಲ್ಲಿ ಕಟ್ಟಡ ನಿರ್ವಣಕ್ಕೆ 5 ಕೋಟಿ ರೂಪಾಯಿ ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದರು.
ನನ್ನ ಬೆಳೆ ನನ್ನ ಹಕ್ಕು ಯೋಜನೆಯಡಿ ರೈತರೇ ತಮ್ಮ ಬೆಳೆಯನ್ನು ನೋಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಬೆಳೆ ಸಮೀಕ್ಷೆ ಉತ್ಸವದಲ್ಲಿ 80 ಲಕ್ಷ ಪ್ಲಾಟ್ಗಳಲ್ಲಿ ಸ್ವತಃ ರೈತರೇ ಸಮೀಕ್ಷೆ ನಡೆಸಿದ್ದಾರೆ. ಕರೊನಾದ ಸಂಕಷ್ಟದಲ್ಲಿಯೂ ರಾಜ್ಯದಲ್ಲಿ 154 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಉತ್ಪಾದಿಸುವ ಮೂಲಕ ಶೇ. 10ರಷ್ಟು ಹೆಚ್ಚಿನ ಉತ್ಪಾದನೆಯನ್ನು ರೈತರು ಮಾಡಿದ್ದಾರೆ. ಆಹಾರ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಪ್ರಧಾನ ಮಂತ್ರಿಗಳು ಆತ್ಮನಿರ್ಭರ ಯೋಜನೆ ಯಡಿ ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಅದರಲ್ಲಿ 10 ಸಾವಿರ ಕೋಟಿ ಆಹಾರ ವಸ್ತುಗಳ ಉತ್ಪಾದನೆ, ಸಂಸ್ಕರಣೆಗೆ ಅನುದಾನ ಒದಗಿಸಲಾಗಿದೆ. ಇದು ಆಹಾರದ ದೃಢತೆ ಹಾಗೂ ಸಮತೋಲನ ಕಾಪಾಡಲು ಸಾಧ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ 3 ಅಲೆ ಎದುರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರ್ಟಿಪಿಸಿಆರ್ ಲ್ಯಾಬ್ ಸ್ಥಾಪನೆ, ಆಕ್ಸಿಜನ್ ಪ್ಲಾಂಟ್ಗಳ ಸ್ಥಾಪನೆ, ವಾತ್ಸಲ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ, ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್, ವೆಂಟಿಲೇಷನ್ ವ್ಯವಸ್ಥೆ ಮಾಡಲಾಗಿದೆ. ಬ್ರಿಟಿಷರಿಂದ ಮುಕ್ತಿ ಪಡೆದಂತೆ ಶಾಶ್ವತವಾಗಿ ಮಾಸ್ಕ್ನಿಂದ ಮುಕ್ತಿ ಪಡೆಯಲು ಕೋವಿಡ್ ನಿಮೂಲನೆಗೆ ಎಲ್ಲರೂ ಸ್ವಯಂ ಜಾಗೃತಿ ವಹಿಸುವುದು ಅವಶ್ಯ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಿದ್ದ ಸ್ವಾತಂತ್ರ್ಯೊತ್ಸವ ಸಮಾರಂಭದಲ್ಲಿ ಸಶಸ್ತ್ರ ಮೀಸಲು ಪಡೆ, ನಾಗರಿಕ ಪಡೆ, ಅಬಕಾರಿ ಪಡೆ, ಗೃಹದಳ, ಅರಣ್ಯ ಪಡೆಗಳು ಪಥಸಂಚಲನ ನಡೆಸಿದವು.
ಕೃಷಿ ಇಲಾಖೆ ಪ್ರಚಾರ ವಾಹನಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ ಚಾಲನೆ ನೀಡಿ, ಕರಪತ್ರ ಗಳನ್ನು ಬಿಡುಗಡೆಗೊಳಿಸಿದರು.
ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಎಸ್ಪಿ ಹನುಮಂತರಾಯ, ಜಿಪಂ ಸಿಇಒ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಸೀಲ್ದಾರ್ ಗಿರೀಶ ಸ್ವಾದಿ ಇತರರಿದ್ದರು.
ಸಾಧಕರಿಗೆ ಸನ್ಮಾನ
ಸ್ವಾತಂತ್ರ್ಯ ಯೋಧ ಮಳ್ಳಪ್ಪ ಕೊಪ್ಪದ, ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಪ್ರಭಾಕರ ಮಂಟೂರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸ್ನೇಹಾ ಹಾವೇರಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಸುಕನ್ಯಾ ಜಾಧವ ಹಾಗೂ ಕರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿದ ಆರೋಗ್ಯ, ಪೊಲೀಸ್, ಗ್ರಾಮೀಣಾಭಿವೃದ್ಧಿ, ಕಂದಾಯ, ಪೌರಕಾರ್ವಿುಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ಸೇರಿ 46 ಜನರಿಗೆ ಪುಸ್ತಕ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಅಭಿವೃದ್ಧಿಗೆ 5 ವರ್ಷಗಳ ನೀಲಿನಕ್ಷೆ
ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ದೂರದೃಷ್ಟಿಯ ಪಂಚವಾರ್ಷಿಕ ಯೋಜನೆ ರೂಪಿಸಲು ಸರ್ಕಾರ ನಿರ್ಧರಿಸಿದೆ. ಜನಪರ ಯೋಜನೆ ಹೆಸರಿನಲ್ಲಿ ಗ್ರಾಮ ಸಭೆಗಳನ್ನು ಕರೆದು ಜನರ ಕುಂದುಕೊರತೆ ಬೇಡಿಕೆಗಳನ್ನು ಪಡೆದು 5 ವರ್ಷಗಳ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಚಿವ ಬಿ.ಸಿ. ಪಾಟೀಲ ತಿಳಿಸಿದರು.