

ವಿಕ್ರಮ ನಾಡಿಗೇರ ಧಾರವಾಡ
ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಯಂತ್ರೋಪಕರಣಗಳ ಭರಾಟೆ ಹೆಚ್ಚಿದೆ. ಸಣ್ಣ ರೈತರು ಯಂತ್ರಗಳನ್ನು ಖರೀದಿಸಿ ಸಾಗುವಳಿ ಮಾಡುವುದು ಕಷ್ಟ. ಆದರೆ ಇಂತಹ ರೈತರಿಗಾಗಿ ಕೃಷಿ ವಿಶ್ವ ವಿದ್ಯಾಲಯದ ಸ್ನೇಹ ತಂಡ ಅತ್ಯಂತ ಕಡಿಮೆ ಖರ್ಚಿನಲ್ಲಿ ಯಂತ್ರೋಪಕರಣ ಸಿದ್ಧಪಡಿಸಿ ಸಹಕಾರಿಯಾಗಿದೆ.
ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿ ರಚಿಸಿರುವ ಸ್ನೇಹ ತಂಡ ಪ್ರತಿ ವರ್ಷ ಒಂದಿಲ್ಲ ಒಂದು ವಿನೂತನ ಸಂಶೋಧನೆ ಮಾಡುತ್ತಲೇ ಇದೆ. ವೈವಿಧ್ಯಮಯ ಕೃಷಿ ತಾಂತ್ರಿಕತೆಗಳಿಂದ ಇಡೀ ಕೃಷಿ ಮೇಳದಲ್ಲಿ ಆಕರ್ಷಿತರಾಗುತ್ತಾರೆ. ಈ ಬಾರಿ ಸಹ ರೈತರಿಗೆ ನೆರವಾಗುವ ವೈವಿಧ್ಯಮಯ ತಾಂತ್ರಿಕತೆಗಳನ್ನು ಸಿದ್ಧಪಡಿಸಿ ಪರಿಚಯಿಸಿದ್ದಾರೆ.
ಈ ಬಾರಿ ಜಾನುವಾರುಗಳ ಉಣ್ಣೆ ಬಾಧೆಗೆ ಗಿಡಮೂಲಿಕೆಗಳ ರಾಮಬಾಣ, ಸುಧಾರಿತ ಔಷಧಿ ಸಿಂಪಡಿಸುವ ಸಾಧನ, ಸೋಯಾ ಅವರೆ ಮತ್ತು ಶೇಂಗಾದಲ್ಲಿ ಮಣ್ಣು ನೀರಿನ ಸುಧಾರಿತ ಸಂರಕ್ಷಣಾ ಪದ್ಧತಿ, ಅಗ್ಗದ ದರದಲ್ಲಿ ಸುಧಾರಿತ ಎಡೆಕುಂಟೆ ಸಾಧನ, ಕಾಳು ಸ್ವಚ್ಛಗೊಳಿಸುವ ಯಂತ್ರಗಳನ್ನು ತಯಾರಿಸಿದ್ದಲ್ಲದೆ, ಲಂಬ ಉದ್ಯಾನ (ವರ್ಟಿಕಲ್ ಗಾರ್ಡನಿಂಗ್) ಹೀಗೆ ರೈತರು ಅತೀ ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಲು ಬೇಕಿರುವ ಎಲ್ಲ ಬಗೆಯ ತಾಂತ್ರಿಕತೆಗಳನ್ನು ಪರಿಚಯಿಸುತ್ತಿದೆ.
ಪ್ರಸಕ್ತ ಸಾಲಿನ ಮೇಳದಲ್ಲಿ ಸುಧಾರಿತ ಔಷಧಿ ಸಿಂಪಡಿಸುವ ಸಾಧನ ಎಲ್ಲರ ಗಮನ ಸೆಳೆದಿದ್ದಲ್ಲದೆ, ರೈತರಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಬೆಳೆ ಸಾಲುಗಳಿಗೆ ಔಷಧಿ ಸಿಂಪಡಿಸಲು ಈ ಸಾಧನ ಸಾಕಷ್ಟು ಸಹಾಯವಾಗಿದೆ.
ಈ ಸಾಧನವು 3 ಅಡಿ ಎತ್ತರದ ಬೆಳೆಗಳಿಗೆ ಅನುಕೂಲಕರವಾಗಿದೆ. ದಿನವೊಂದಕ್ಕೆ 8-10 ಎಕರೆ ಪ್ರದೇಶದಲ್ಲಿನ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡಬಹುದು. ಸುಲಭ ವಿಧಾನದಲ್ಲಿ ಮನೆಯಲ್ಲೇ ಸಾಧನ ಸಿದ್ಧವಾಗಲಿದೆ. ಇದಕ್ಕೆ ಬ್ಯಾಟರಿ ಸ್ಪ್ರೇಯರ್, ನಾಜಲ್‌ಗಳು (ಫಾಗ್ ಸ್ಪ್ರೇಯರ್-12), ಡ್ರಿಪ್ ಪೈಪ್ (15 ಅಡಿ) ಬಳಕೆಗೆ ತಕ್ಕಂತೆ 4 ಎಂ.ಎಂ., ಕನೆಕ್ಟರ್ (2), ಹಾಗೂ ಕಬ್ಬಿಣದ ಪೈಪ್ ಅಥವಾ ಬಿದಿರು (15 ಅಡಿ) ಬಳಸಲಾಗುತ್ತದೆ.
ಇದಲ್ಲದೆ ಸೈಕಲ್ ಚಕ್ರದಿಂದ ಸಿದ್ಧವಾದ ಅಗ್ಗದ ಸುಧಾರಿತ ಎಡೆಕುಂಟೆ ಸಾಧನವನ್ನು 2000 ರೂ.ದಲ್ಲಿ ಸಿದ್ಧಪಡಿಸಿದ್ದಾರೆ. ಇದು ಯಂತ್ರ ಹಾಗೂ ಎತ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲಿದೆ. ಸುಮಾರು ಒಂದೂವರೆ ತಾಸಿನಲ್ಲಿ ಒಂದು ಎಕರೆಯಷ್ಟು ಎಡೆಯನ್ನು ಹೊಡೆಯಬಹುದು. ಈ ಸಾಧನವನ್ನು ಸೈಕಲ್ ಚಕ್ರ, 4 ಕಬ್ಬಿಣದ ವೃತ್ತಾಕಾರದ ಪೈಪ್‌ಗಳು, ಒಂದು ಆಯತಾಕಾರದ ಕಬ್ಬಿಣದ ಪೈಪ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಹೀಗೆ ರೈತರ ಅಗತ್ಯತೆ, ಆದ್ಯತೆ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಹಿರಿಯ ಮಾರ್ಗದರ್ಶನ, ಶಿಕ್ಷಕರ ಸಲಹೆ ಮೇರೆಗೆ ಹೊಸ ಹೊಸ ಆವಿಷ್ಕಾರ ಮಾಡುತ್ತಿರುವ ಈ ತಂಡ ರೈತ ಸ್ನೇಹಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೃಷಿ ಮೇಳಕ್ಕೆ ಆಗಮಿಸುವ ಪ್ರತಿ ರೈತರು ಈ ಮಳಿಗೆಗೆ ತಪ್ಪದೇ ಭೇಟಿ ನೀಡಿ ಈ ಬಾರಿ ಯಾವ ಹೊಸ ಪ್ರಯೋಗ ಮಾಡಿದ್ದಾರೆ ಎಂಬದನ್ನು ತಿಳಿದುಕೊಂಡೇ ಹೋಗುತ್ತಾರೆ.
ರೈತರಿಗೆ ಕೈಗೆಟಕುವ ದರದಲ್ಲಿ ಹಾಗೂ ಪ್ರಯೋಜನವಾಗುವ ಯಂತ್ರಗಳನ್ನು ಆವಿಷ್ಕಾರ ಮಾಡಲಾಗುತ್ತದೆ. ಇದು ಕೃಷಿಯಲ್ಲಿ ಹೊಸತನ ತರಲು ಸಾಕಷ್ಟು ಅನುಕೂಲವಾಗಿದೆ. ಮಳಿಗೆಗೆ ಸಾಕಷ್ಟು ರೈತರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಗೆಯ ಸಾಧನಗಳ ಆವಿಷ್ಕಾರ ಮಾಡುವ ಚಿಂತನೆ ಇದೆ.ಅವಿನಾಶ, ಕೃವಿವಿ ವಿದ್ಯಾರ್ಥಿ, (ಸ್ನೇಹ ತಂಡದ ಸದಸ್ಯ)