

ಅಂಕೋಲಾ: ದೇಶದಲ್ಲಿ ರೈತರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಸ್ವದೇಶಿ ಪದಾರ್ಥಕ್ಕಿಂತ ವಿದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಇಲ್ಲಿಯ ಎಲ್ಲಾ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟು ರ್ಚಚಿಸಲಾಗುವುದು ಎಂದು ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಐ.ಎನ್. ಬಸವೇಗೌಡ ಹೇಳಿದರು.
ತಾಲೂಕಿನ ಕಲ್ಲೇಶ್ವರದ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಡೋಂಗ್ರಿ ಗ್ರಾಮ ಪಂಚಾಯಿತಿ ಮತ್ತು ಕಿಸಾನ್ ಸಂಘದ ಆಶ್ರಯದಲ್ಲಿ ಗುರುವಾರ ದೇಶದಲ್ಲಿಯೇ ಪ್ರಥಮ ರೈತ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ ಮಾತನಾಡಿ, ಅಡಕೆ, ತೆಂಗು, ಕಾಳು ಮೆಣಸು ಸೇರಿದಂತೆ ಸಾಕಷ್ಟು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಅಗತ್ಯವಿದೆ. ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಿದರೆ, ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡುವ ಅಧಿಕಾರ ಹೊಂದಿದೆ. ಈ ಸಭೆಯ ಮೂಲಕ ಕೇಂದ್ರದ ಗಮನ ಸೆಳೆಯಲಾಗುವುದು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಪಿ. ಸತೀಶ ಮಾತನಾಡಿದರು. ಡೋಂಗ್ರಿ ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಜಗದೀಶ ನಾಯಕ ಮೊಗಟಾ, ಪ್ರಮುಖರಾದ ಶಿವಪ್ಪ ನಾಯಕ, ಗಣಪತಿ ನಾಯಕ, ಬಾಲಚಂದ್ರ ಶೆಟ್ಟಿ, ಮಾದೇವ ಹೆಗಡೆ, ಶ್ರೀಕಾಂತ ಭಟ್ಟ, ಶ್ರೀಧರ ನಾಯ್ಕ, ಚೇತನ ನಾಯ್ಕ, ರಾಘವೇಂದ್ರ ಗಾಂವಕರ ಸೇರಿದಂತೆ ಹಲವರು ಈ ಸಭೆಯಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ರ್ಚಚಿಸಿದರು.
ಕನಿಷ್ಠ ಮಾರಾಟ ಬೆಲೆ ನಿಗದಿ: ಈ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಪ್ರತಿ ಕ್ವಿಂಟಾಲ್ ಹಸಿ ಅಡಕೆಗೆ 33,330 ರೂ. ಚಾಲಿಗೆ 25 ಸಾವಿರ ರೂ. ಕಾಳು ಮೆಣಸಿಗೆ 35 ಸಾವಿರ ರೂ. ಭತ್ತಕ್ಕೆ ಕನಿಷ್ಠ 3,500 ರೂ. ಹಾಲಿಗೆ ಪ್ರತಿ ಲೀಟರ್ಗೆ 44.50 ರೂ., ತೆಂಗಿನ ಕಾಯಿಗೆ ಪ್ರತಿ ಕೆಜಿಗೆ 35 ರೂ., ಕನಿಷ್ಠ ಮಾರಾಟ ಬೆಲೆ ನಿಗದಿಗೆ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿ ಬೆಲೆ ನಿಗದಿಗೆ ಒತ್ತಾಯಿಸಲು ತೀರ್ವನಿಸಲಾಯಿತು.