

ಕುಂದಗೋಳ: ಹಿಂದಿನ ಸರ್ಕಾರದ ರೈತರ ಸಾಲ ಮನ್ನಾ ಯೋಜನೆಯಡಿ ಅನೇಕ ರೈತರ ಸಾಲ ಮನ್ನಾ ಆಗಿಲ್ಲ. ಇದರಿಂದ ತಾಲೂಕಿನ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೆ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಮುಖಂಡ ಮುತ್ತಣ್ಣ ಶಿವಳ್ಳಿ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಮುತ್ತಣ್ಣ ಶಿವಳ್ಳಿ, ಸಾಲ ಮನ್ನಾ ಯೋಜನೆಯಡಿ ರೈತರಿಗೆ ಋಣಮುಕ್ತ ಪತ್ರ ನೀಡಿ ಕುಮಾರಸ್ವಾಮಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರಿದೆ. ಈ ಯೋಜನೆಯಿಂದ ತಾಲೂಕಿನಲ್ಲಿ ಶೇ. 40ರಷ್ಟು ರೈತರ ಸಾಲ ಮನ್ನಾ ಆಗಿಯೇ ಇಲ್ಲ. ಈಗ ಬ್ಯಾಂಕ್ ಅಧಿಕಾರಿಗಳು ರೈತರಿಗೆ ದಂಡದ ಬಡ್ಡಿ ಹಾಕಿ ಸಾಲ ಮರು ಪಾವತಿಗೊಳಿಸುವಂತೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಬಸವರಾಜ ಮೆಳವಂಕಿ, ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ರವಾನಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಶಂಕರಗೌಡ ದೊಡಮನಿ, ಬಾಬಾಜಾನ್ ಮುಲ್ಲಾ, ಮುತ್ತಣ್ಣ ಹಿರೇಮಠ, ಎಂ.ಎಚ್. ಕಮಡೊಳ್ಳಿ, ಜಿ.ಬಿ. ಉಳ್ಳಬ್ಬಿ, ಬೀರಪ್ಪ ತಿರ್ಲಾಕೊಪ್ಪ, ಹನುಮಂತಪ್ಪ ಕಡೇಸೂರ, ಕಲಂದರ ಹೊರಕೇರಿ, ಇತರರು ಇದ್ದರು.