ರೈತರ ಸಮಾಧಿ ಮಾಡಲು ಹೊರಟಿದ್ದಾರೆ

ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶನಿವಾರ ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ನಿರಂತರ ಚಳವಳಿ ಶನಿವಾರವೂ ಮುಂದುವರಿಯಿತು. ಕೆ.ಎಸ್.ನಂಜುಂಡೇಗೌಡ, ಬಲ್ಲೇನಹಳ್ಳಿ ಕೃಷ್ಣೇಗೌಡ, ಜಯರಾಮೇಗೌಡ, ಜಗದೀಶ್, ಡಿ.ಮಂಜುನಾಥ್, ಶಿವರಾಜು ಇತರರಿದ್ದರು.
SRP _02-01jpg
Published on

ಶ್ರೀರಂಗಪಟ್ಟಣ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಧಿಮಾಕು ಹಾಗೂ ದರ್ಪದ ಅಧಿಕಾರ ನಡೆಸುತ್ತಿದ್ದು ಕೃಷಿ ಹಾಗೂ ಕೃಷಿಕ ಜನರ ತಲೆಯ ಮೇಲೆ ಕಲ್ಲು ಚಪ್ಪಡಿ ಎಳೆದು ಸಮಾಧಿ ಮಾಡಲು ಮುಂದಾಗಿದ್ದಾರೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಆಕ್ರೋಶ ಹೊರಹಾಕಿದರು.

ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶನಿವಾರ ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಚಳುವಳಿಯ ಭಾಗವಾಗಿ ಕಾರ್ಯಕರ್ತರೊಂದಿಗೆ ತಲೆಯ ಮೇಲೆ ಕಲ್ಲು ಚಪ್ಪಡಿ ಹೊತ್ತು ಮುಖ್ಯರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ಕುರಿತು ಮಾತನಾಡಿದರು.

ರೈತರ ಹಿತಾಸಕ್ತಿ ಕಡೆಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಇಬ್ಬರೂ ಮಹಾನ್ ನಾಯಕರು ಈಗಲೂ ಕೃಷಿ ಉಳಿಸಿಕೊಳ್ಳಲು ಹರಿಯುತ್ತಿರುವ ನೀರು ಸ್ಥಗಿತಕ್ಕೆ ಸತತ ಹೋರಾಟ ಮಾಡುತ್ತಿರುವ ಕಾವೇರಿ ಕೊಳ್ಳದ ಕೃಷಿಕರ ದನಿಗೆ ಸ್ಪಂದಿಸಿ ಕಾನೂನು ಹೋರಾಟ ಮಾಡಲು ಆಸಕ್ತಿ ತೋರುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಮಂಡ್ಯ ಜಿಲ್ಲೆಯ ರೈತರ ಹೋರಾಟದ ಕಿಚ್ಚಿನ ಪರಿಣಾಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಎದುರಿಸಲಿದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಉಪಾಧ್ಯಕ್ಷರಾದ ಜಯರಾಮೇಗೌಡ, ಜಗದೀಶ್, ಸಂಚಾಲಕರಾದ ಡಿ.ಮಂಜುನಾಥ್, ಧನಂಜಯ, ಸಂಘಟನಾ ಕಾರ್ಯದರ್ಶಿಗಳಾದ ಶಿವರಾಜು, ಮಹಾಲಿಂಗು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ಹೋಬಳಿ ಸಂಚಾಲಕ ಪಾಲಹಳ್ಳಿ ರಾಮಚಂದ್ರು ಪದಾಧಿಕಾರಿಗಳಾದ ರವಿಲಕ್ಷ್ಮಣ, ಚಾಮರಾಜು, ಸಿದ್ದೇಗೌಡ, ರಾಮಚಂದ್ರು, ರಮೇಶ್, ಕಿರಂಗೂರು ಪುಟ್ಟಣ,ಬಲ್ಲೇನಹಳ್ಳಿ ಮಹೇಶ್, ಬೆಳಗೊಳ ಸುನೀಲ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net