ರೈತರ ಸಮಸ್ಯೆ ಪರಿಹಾರಕ್ಕೆ ಆಗ್ರಹ

Published on

ಗುಂಡ್ಲುಪೇಟೆ: ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರೈತ ಸಂಘಟನೆ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಸಾಮೂಹಿಕ ನಾಯಕತ್ವದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಮೈಸೂರು ರಸ್ತೆಯಿಂದ ಟ್ರ್ಯಾಕ್ಟರ್ ಹಾಗೂ ಬೈಕ್ ರ‌್ಯಾಲಿ ಮೂಲಕ ಆಗಮಿಸಿದ ರೈತ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹೊನ್ನೂರು ಪ್ರಕಾಶ್ ಮಾತನಾಡಿ, ಪ್ರತಿ ವರ್ಷ ಕಾವೇರಿ ಕೊಳ್ಳದಿಂದ 70 ರಿಂದ 80 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದ್ದರೂ ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿಲ್ಲ. ಕಟಾವು ಮುಗಿದರೂ ಸೂರ್ಯಕಾಂತಿ ಖರೀದಿ ಕೇಂದ್ರ ತೆರೆದಿಲ್ಲ. ಗ್ರಾಮೀಣ ರಸ್ತೆಗಳು ಹಾಳಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಅದನ್ನು ರಿಪೇರಿ ಮಾಡಿಸುತ್ತಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ಪ್ರತಿ ದಿನವೂ ಒಂದಲ್ಲಾ ಒಂದು ಕಡೆ ವನ್ಯಜೀವಿಗಳಿಂದ ತೊಂದರೆಗಳಾಗುತ್ತಿದೆ. ಆದರೆ ಅರಣ್ಯ ಇಲಾಖೆ ಕಾಡಂಚಿನ ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಬದಲು ಜನರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಬೊಮ್ಮಲಾಪುರ ಗ್ರಾಮದಲ್ಲಿ ಹಲವಾರು ತಿಂಗಳಿನಿಂದ ಹುಲಿ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದ ರೈತರ ವಿರುದ್ಧ ಸುಳ್ಳು ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ. ಇಷ್ಟಾದರೂ ಕ್ಷೇತ್ರದ ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದು ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಧಿಕಾರಿಗಳು ಕೆಲಸಗಳನ್ನು ಮಾಡದೆ ಸಾರ್ವಜನಿಕರ ಮೇಲೆ ದರ್ಪ ತೋರಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಲಂಚ ಕೊಡದೆ ಸಾರ್ವಜನಿಕರ ಯಾವುದೇ ಕೆಲಸಕಾರ್ಯಗಳೂ ಆಗುತ್ತಿಲ್ಲ, ಶಿವಪುರ ಗ್ರಾಮಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭಲ್ಲಿ ಅಧಿಕಾರಿಗಳು ತಾವು ಲಂಚ ಪಡೆದಿದ್ದ ಹಣವನ್ನು ವಾಪಸ್ ಮಾಡಿದ್ದರೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಎಸ್.ತನ್ಮಯಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಷಣ್ಮುಗ, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಾದೇಶ್, ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್, ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿಗೆ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪಟ್ಟಿ ನೀಡಿದರು. ಮುಂದಿನ ಒಂದು ತಿಂಗಳ ಒಳಗಾಗಿ ಸಂಬಂಧಿಸಿದ ಇಲಾಖೆಗಳು ತಮಗೆ ಬಂದಿರುವ ದೂರುಗಳ ಬಗ್ಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂಘಟನೆಯ ನಾನಾ ಗ್ರಾಮಘಟಕಗಳ ಪದಾದಿಕಾರಿಗಳು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net