ರೈತರ ಸಮಸ್ಯೆ ಎಷ್ಟರ ಮಟ್ಟಿಗೆ ಬಗೆಹರಿಸಿದ್ದೀರಾ?

bir mescom 1
ಬೀರೂರಿನ ಮೆಸ್ಕಾಂ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಯಿತು. ಚಿಕ್ಕಮಗಳೂರು ಅಧೀಕ್ಷಕ ಇಂಜಿನಿಯರ್ ಮಂಜುನಾಥ್, ಎಇಇ ವೀಣಾ, ವಿಜಯಕುಮಾರ್, ಯತೀಶ್ ಇತರರಿದ್ದರು.
Published on

ಬೀರೂರು: ಪ್ರತಿ ಬಾರಿಯೂ ಜನಸಂಪರ್ಕ ಸಭೆ ಏರ್ಪಡಿಸುವುದರೊಂದಿಗೆ ಗ್ರಾಹಕರ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುತ್ತೀರಾ. ಆದರೆ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಬಗೆಹರಿಸಿದ್ದೀರಾ? ಎಂದು ಗ್ರಾಹಕರು ಮತ್ತು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೆಸ್ಕಾಂ ಕಚೇರಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಹೊಗರೇಹಳ್ಳಿಯಲ್ಲಿ ಟಿಸಿ ಮಾರ್ಗ ಬದಲಾವಣೆಯ ಡಿವಾಲ್ ಮುರಿದು ಹೋಗಿದ್ದು, ಸರಿಪಡಿಸಿಕೊಡುವಂತೆ 6 ತಿಂಗಳಿನಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶೀಘ್ರವಾಗಿ ಸರಿಪಡಿಸಿಕೊಡಿ ಎಂದು ಒತ್ತಾಯಿಸಿದರು.

ಬೀರೂರಿನ ಮಾರ್ಗದಕ್ಯಾಂಪ್ ನಿವಾಸಿ ಮಲ್ಲಿಕಾರ್ಜುನ್ ಮಾತನಾಡಿ, ಪೌಲ್ಟ್ರಿ ಫಾರ್ಮ್‌ನ ವಿದ್ಯುತ್ ಮಾಪಕದಲ್ಲಿ ದೋಷವಿದ್ದ ಬಗ್ಗೆ ಅರ್ಜಿ ನೀಡಿದ್ದು, ಅದನ್ನು ನಿಮ್ಮ ಇಲಾಖೆಯ ಎನರ್ಜಿ ಆಡಿಟರ್ (ಸ್ಥಾವರ ಮಾಪಕ ಪರಿಶೋಧಕರು) ಪರಿಶೀಲಿಸಿ ದೋಷವಿರುವುದನ್ನು ದೃಢಪಡಿಸಿ ವರದಿ ನೀಡಿದ್ದರೂ ಮೆಸ್ಕಾಂನಿಂದ ಪರಿಹಾರ ನೀಡದೆ ವಿದ್ಯುತ್ ಬಿಲ್ ಹತ್ತಾರು ಸಾವಿರ ರೂಪಾಯಿಗೆ ಏರಿಕೆ ಆಗಿದೆ. ಅದನ್ನು ಸರಿಪಡಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ನಿಮ್ಮ ಇಲಾಖೆಯ ಆಡಿಟರ್ ವರದಿಗೆ ಬೆಲೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಗರೇಹಳ್ಳಿ ರೈತ ಮನು ಮಾತನಾಡಿ, ಹೊಗರೇಹಳ್ಳಿಯಲ್ಲಿ ವಾರದಿಂದಲೂ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಗ್ರಾಮದ ಬಡಾವಣೆಗಳಿಗೂ ಹಾಗೂ ತೋಟದ ಲೈನ್‌ಗಳಿಗೂ ಒಂದೇ ಬಾರಿ ವಿದ್ಯುತ್ ನೀಡುತಿದ್ದೀರಾ. ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆ? ಗೌರಿ ಹಬ್ಬದ ಸಡಗರವನ್ನು ವಿದ್ಯುತ್ ಕೊಡದೆ ಕಸಿದಿದ್ದೀರಿ. ಈ ಬಗ್ಗೆ ಮೇಲಾಧಿಕಾರಿಯಾದ ನಿಮಗೆ ಮಾಹಿತಿ ನೀಡಲು ಕರೆ ಮಾಡಿದರೆ ಫೋನ್ ಬಾರದಂತೆ ಬ್ಲಾೃಕ್‌ಗೆ ಹಾಕುತ್ತೀರಿ. ಸರ್ಕಾರ ನಿಮಗೆ ಫೋನ್ ಕೊಡುವುದು ಏಕೆ. ಸರ್ಕಾರ ನಿಗದಿ ಮಾಡಿರುವ 7 ಗಂಟೆ ರೈತರ ವಿದ್ಯುತ್‌ನ್ನು ನಿರಂತರವಾಗಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಮಲ್ಲೇಗೌಡ ಫಾರ್ಮ್ ಬಳಿ ವಿದ್ಯುತ್ ಲೈನ್‌ನ್ನು ಅಂದಾಜು 40 ಕಡೆಗಳಲ್ಲಿ ಜೋಡಣೆ ಮಾಡಲಾಗಿದ್ದು, ಯಾವಾಗ ಎಲ್ಲಿ ತುಂಡಾಗಿ ಬೀಳುತ್ತದೆ ಎಂಬುದು ತಿಳಿಯುತ್ತಿಲ್ಲ. ಏನಾದರೂ ಅವಘಡ ಸಂಭವಿಸುವ ಮೊದಲು ಲೈನ್ ಬದಲಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಹಕ ಸೋಮಶೇಖರ್ ಮಾತನಾಡಿ, ಮೆಸ್ಕಾಂ ಏರ್ಪಡಿಸುವ ಜನಸಂಪರ್ಕ ಸಭೆ ಬಗ್ಗೆ ಸೂಕ್ತವಾಗಿ ಪ್ರಚಾರ ಮಾಡದಿದ್ದರೆ ಸಭೆಯಲ್ಲಿ ರೈತರು ಹಾಗೂ ಗ್ರಾಹಕರು ಭಾಗವಹಿಸಲು ಹೇಗೆ ಸಾಧ್ಯ? ಮೂರ‌್ನಾಲ್ಕು ದಿನಗಳ ಮೊದಲು ಉಪವಿಭಾಗ ವ್ಯಾಪ್ತಿಯ ನಾಗರಿಕರಿಗೆ ಮಾಹಿತಿ ನೀಡಿ ಎಂದು ಒತ್ತಾಯಿಸಿದರು.

ಎಇಇ ಕೆ.ಎಸ್.ವೀಣಾ, ಎಇ ವಿಜಯಕುಮಾರ್, ಎಇ ಯತೀಶ್, ಹಿರೇನಲ್ಲೂರು ಜೆಇ ಕಿಶೋರ್ ರಾಜ್, ಲೆಕ್ಕ ಸಹಾಯಕ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net