ರೈತರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ

23Blh4
ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಕಳೆದ ಐದು ದಿನದಿಂದ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ಶಿವರಂಜನ ಬೋಳನ್ನವರ, ಬಸವರಾಜ ಜನ್ಮಟ್ಟಿ, ಮಹಾಂತೇಶ ತುರಮರಿ, ಬಿ.ಎಂ.ಚಿಕ್ಕನಗೌಡ್ರ, ಉಳವಪ್ಪ ಬಡ್ಡಿಮನಿ, ವಿರೂಪಾಕ್ಷ ವಾಲಿ, ಪಾಂಡಪ್ಪ ಇಂಚಲ ಇತರರಿದ್ದರು.
Published on

ಬೈಲಹೊಂಗಲ: ಭೂಸ್ವಾಧೀನಗೊಂಡ ಜಮೀನುಗಳ ಡೈರಿ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಭರವಸೆ ನೀಡಿದರು.

ಪಟ್ಟಣದ ಎಸಿ ಕಚೇರಿ ಮುಂಭಾಗದಲ್ಲಿ ಕಳೆದ ಐದು ದಿನಗಳಿಂದ ಮಲಪ್ರಭಾ ಏತ ನೀರಾವರಿ ಬಳಕೆದಾರರ ಸಂಘ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾಡಾ ಅಧ್ಯಕ್ಷನಾಗಿರುವುದರಿಂದ ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶ ನನ್ನ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ರೈತರ ಜಮೀನುಗಳ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿಯಾಗಿದೆ. ಎಸಿ ಅವರ ಜತೆಗೂಡಿ, ಜಿಲ್ಲಾಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆ ಇತ್ಯರ್ಥದ ಕುರಿತು ಚರ್ಚಿಸಲಾಗುವುದು. ರೈತರ ಹೋರಾಟಕ್ಕೆ ನ್ಯಾಯ ಒದಗಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು.

ಹೋರಾಟಕ್ಕೆ ಬೆಂಬಲ: ರೈತರ ಹೋರಾಟ ಐದನೆ ದಿನಕ್ಕೆ ಮುಂದುವರಿದಿದ್ದು, ಹೋರಾಟಕ್ಕೆ ಕಳಸಾ-ಬಂಡೂರಿ ಹಾಗೂ ಮಹದಾಯಿ ಹೋರಾಟದ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಮಾತನಾಡಿ, ರೈತರೆಲ್ಲ ಒಗ್ಗಟ್ಟಾದರೆ ಚುನಾವಣೆ ಬಹಿಷ್ಕಾರ ಮಾಡಬಹುದು.

ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಮಾತನಾಡಿ, ಈ ಕುರಿತು ಪುರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಕಿತ್ತೂರು ಭಾಗದ ರೈತರ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ನಾಡಿನ ಎಲ್ಲ ಯುವಕ ಸಂಘಟನೆಗಳನ್ನು ವಿಶ್ವಾಸ ತೆಗೆದುಕೊಂಡು ತೀವ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸಂಘಟಕರಾದ ಬಿ.ಎಂ.ಚಿಕ್ಕನಗೌಡ್ರ ಮಾತನಾಡಿ, ಭೂಸ್ವಾಧೀನದ ಡೈರಿ ಮಾಡಲಾಗಿದೆ. ಆದರೆ, ಈ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅವಾರ್ಡ ಪತ್ರ ಪರಿಶೀಲನೆ ಮಾಡದೆ 11 ಇ ಸ್ಕೆಚ್, ಹದ್ದುಬಸ್ತ ಗುರುತು ಮಾಡದೇ ಪೋಡಿ ಮಾಡಿದ್ದಾರೆ. ಇದನ್ನು ರದ್ದು ಪಡಿಸಿ, ತಮ್ಮ ಬೇಡಿಕೆ ಈಡೇರಿಸಬೇಕು ಎಂದರು. ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ, ಮಾಜಿ ಸದಸ್ಯ ವಿರೂಪಾಕ್ಷ ವಾಲಿ, ಪಾಂಡಪ್ಪ ಇಂಚಲ, ಆನಂದ ಹಂಪನ್ನವರ, ಅಬ್ದುಲ್‌ರೌಫ ಮುಲ್ಲಾ, ರಮೇಶ ರಾಯಪ್ಪಗೋಳ, ಮಲ್ಲಿಕಾರ್ಜುನ ಹುಂಬಿ, ಸುರೇಶ ಸಂಪಗಾಂವ, ಮಡಿವಾಳಪ್ಪ ಹೋಟಿ, ಆನಂದ ಮೂಗಿ, ಶ್ರೀಕಾಂತ ಶಿರಹಟ್ಟಿ, ಬಾಬು ಮುರಗೋಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net