

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂಜಿನಿಯರ್‌ಗಳು ರೈತರ ಸಮಸ್ಯೆ ಅರಿತು ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಬೆಳಗಾವಿ ಕಾಡಾ ಆಡಳಿತಾಧಿಕಾರಿ ಎಂ. ಸತೀಶಕುಮಾರ ಸಲಹೆ ಮಾಡಿದರು.
ನಗರದ ಜಲ, ನೆಲೆ ನಿರ್ವಹಣಾ ಸಂಸ್ಥೆಯಲ್ಲಿ (ವಾಲ್ಮಿ) ಇತ್ತೀಚೆಗೆ ಏರ್ಪಡಿಸಿದ್ದ ನೀರಾವರಿ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಇಂಜಿನಿಯರ್‌ಗಳ ಒಂದು ತಿಂಗಳ ಕಡ್ಡಾಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೊದಲು ಹೊಲಗಳಿಗೆ ಹರಿಸಿದ ನೀರಿನ ಕರವನ್ನು ಕಂದಾಯ ಇಲಾಖೆ ಆಕರಣೆ ಮಾಡುತ್ತಿತ್ತು. ಆದರೆ ಕರ್ನಾಟಕ ನೀರಾವರಿ ಕಾಯ್ದೆ ಮತ್ತು ಕರ್ನಾಟಕ ಸಹಕಾರ ಕಾಯ್ದೆಗಳಿಗೆ ತಿದ್ದುಪಡಿ ತಂದ ಬಳಿಕ ರಾಜ್ಯದ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಿದ್ದು, ನೀರಿನ ಬಳಕೆ ಶುಲ್ಕ ಸಂಗ್ರಹಿಸುವ ಜವಾಬ್ದಾರಿ ನೀರಾವರಿ ನಿಗಮಗಳಿಗೆ ವಹಿಸಲಾಗಿದೆ. ಇದನ್ನು ಅರಿತು ಶುಲ್ಕವನ್ನು ನಿಗಮಕ್ಕೆ ಪಾವತಿ ಮಾಡಬೇಕು ಎಂದರು.
ತರಬೇತಿ ಶಿಬಿರದಲ್ಲಿ ಆರ್‌ಟಿಐ ಕಾಯ್ದೆ, ಕೆಟಿಪಿಪಿ ಕಾಯ್ದೆ, ಭೂ ಸ್ವಾಧೀನ ಕಾಯ್ದೆ ಮೊದಲಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇವುಗಳನ್ನು ಸಮರ್ಪಕವಾಗಿ ಅರಿತು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಅವರಿಗೆ ದೊರಕುವ ಪರಿಹಾರಧನ, ಪುನರ್ವಸತಿ ಮೊದಲಾದ ವಿಷಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಬಿ.ವೈ. ಬಂಡಿವಡ್ಡರ ಮಾತನಾಡಿ, ಇಂಜಿನಿಯರ್ಸ್ ಕ್ಷೇತ್ರದಲ್ಲಿ ಹೋದಾಗ ಎದುರಾಗುವ ಸಮಸ್ಯೆಗಳನ್ನು ಅರಿತುಕೊಂಡು ಸರಿಯಾಗಿ ಸ್ಪಂದಿಸಬೇಕು. ಶಿಬಿರದಲ್ಲಿ ಮಣ್ಣಿನ ಆರೋಗ್ಯ, ಫಲವತ್ತತೆ, ಅಂತರರಾಜ್ಯ ನೀರು ವಿವಾದ, ಸಹಭಾಗಿತ್ವ ನೀರಾವರಿ ಯೋಜನೆ, ಕಾಲುವೆಗಳ ನಿರ್ವಹಣೆ, ನೀರು ಬಳಕೆದಾರರ ಸಹಕಾರ ಸಂಘಗಳ ರಚನೆ ಇತರ ವಿಷಯಗಳ ಬಗ್ಗೆ ತಜ್ಞರ ಉಪನ್ಯಾಸ, ಕ್ಷೇತ್ರ ಭೇಟಿ ಆಯೋಜಿಸಲಾಗುತ್ತದೆ ಎಂದರು.
ಆರ್. ಕುಮಾರಸ್ವಾಮಿ ಸ್ವಾಗತಿಸಿದರು. ಅನುರಾಧಾ ಮಳಗಿ, ಫಕ್ಕೀರೇಶ ಅಗಡಿ ನಿರೂಪಿಸಿದರು. ಚೇತನ ಶೆಟ್ಟಿ ವಂದಿಸಿದರು.