ರೈತರ ಶ್ರಮದಿಂದ ದೇಶದ ಆಹಾರ ಭದ್ರತೆ ಸುರಕ್ಷ

ರೈತರ ಶ್ರಮದಿಂದ ದೇಶದ ಆಹಾರ ಭದ್ರತೆ ಸುರಕ್ಷ
Published on

ಚನ್ನರಾಯಪಟ್ಟಣ: ರಾಸಾಯನಿಕ ಗೊಬ್ಬರದ ದರ ಹೆಚ್ಚಿದಂತೆಲ್ಲ ರೈತ ಬೆಳೆದ ಬೆಳೆಗಳ ಬೆಲೆ ಏರಿಕೆಯಾಗಿ ಸಮತೋಲನ ಕಾಯ್ದುಕೊಂಡಾಗ ಮಾತ್ರ ರೈತನ ಶ್ರಮಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ಪಟ್ಟಣದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ವತಿಯಿಂದ ಶನಿವಾರ ಅಯೋಜಿಸಿದ್ದ ತಾಲೂಕು ಮಟ್ಟದ ರೈತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.


ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರ ಶ್ರಮವನ್ನು ಕಡೆಗಣಿಸುವ ಕೆಲಸವಾಗುತ್ತಿದೆ. ಅದೆಷ್ಟೇ ಬರ ಪರಿಸ್ಥಿತಿ ಬಂದರೂ ದೇಶದಲ್ಲಿ ಆಹಾರ ಕೊರತೆ ಕಂಡುಬಂದಿಲ್ಲ. ಆಹಾರ ಭದ್ರತೆಗೆ ರೈತನ ಶ್ರಮ ಕಾರಣವಾಗಿದ್ದು ಆತನಿಗೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದರು.


ಕಬ್ಬು, ರಾಗಿ ಹಾಗೂ ಕೊಬ್ಬರಿಗೆ ಬೆಂಬಲ ಬೆಲೆ ಕಲ್ಪಿಸುವಂತೆ ಒತ್ತಾಯಿಸಿ ಅಧಿವೇಶನದಲ್ಲಿ ಸಿಎಂ ಗಮನಕ್ಕೆ ತರಲಾಗಿದೆ. ಕೇಂದ್ರ ಸರ್ಕಾರ ಸದ್ಯ ಕೊಬ್ಬರಿಗೆ 750 ಬೆಂಬಲ ಬೆಲೆ ಘೋಷಿಸಿದ್ದು ಪ್ರತಿ ಕ್ವಿಂಟಾಲ್‌ಗೆ 11750 ದರ ನಿಗದಿಗೊಳಸಿದೆ ಎಂದು ತಿಳಿಸಿದರು.
ಆದರೆ ಇದರಿಂದ ಉಪಯೋಗವಿಲ್ಲ. ಕನಿಷ್ಟ 14000 ರೂ. ದರ ನಿಗದಿಗೊಳಿಸುವ ಮೂಲಕ ತೆಂಗು ಬೆಳೆಗಾರರ ರಕ್ಷಣೆಗೆ ನಿಲ್ಲಬೇಕು. ಸದ್ಯ ಘೋಷಿಸಿರುವ ಬೆಂಬಲ ಬೆಲೆಯನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.


ನಫೆಡ್ ಅಧಿಕಾರಿ ಚೇತನ್ ಮಾತನಾಡಿ, ತಾಲೂಕಿನಲ್ಲಿ ರಾಗಿ ಖರೀದಿಗಾಗಿ ಚನ್ನರಾಯಪಟ್ಟಣ, ಉದಯಪುರ, ನುಗ್ಗೇಹಳ್ಳಿ, ಮತ್ತು ಶ್ರವಣಬೆಳಗೊಳ ಸೇರಿದಂತೆ 4 ಕೇಂದ್ರಗಳನ್ನು ತೆರೆಯಲಾಗಿದೆ. ಡಿ.31 ನೊಂದಣಿಗೆ ಕಡೆ ದಿನವಾಗಿದೆ. ರೈತರು ಆಧಾರ್ ಕಾರ್ಡ್‌ನೊಂದಿಗೆ ಕೃಷಿ ಇಲಾಖೆಯ ಪ್ರೋಟ್ ಐಡಿ ಹೊಂದಿ ಪಟ್ಟಣದ ಎಪಿಎಂಸಿ ಇಲ್ಲವೇ ಅಯಾ ಹೋಬಳಿ ರೈತಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ಕ್ವಿಂಟಾಲ್ ರಾಗಿಗೆ 3578 ರೂ. ದರ ನಿಗದಿಯಾಗಿದೆ ಎಂದರು.


ವೇದಿಕೆಯಲ್ಲಿ ತಾಲೂಕಿನ ಸಾವಯವ ಕೃಷಿಕ ರೈತರನ್ನು ಅಭಿನಂಧಿಸಲಾಯಿತು. ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯ ಧನದಲ್ಲಿ ವಿವಿಧ ಯಂತ್ರಗಳನ್ನು ರೈತರಿಗೆ ವಿತರಣೆ ಮಾಡಲಾಯಿತು.
ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಪುರಸಭಾ ಅಧ್ಯಕ್ಷೆ ರಾಧ ಮಂಜುನಾಥ್, ಉಪಾಧ್ಯಕ್ಷೆ ಲಕ್ಷ್ಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ಸಿ.ಆನಂದ್‌ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ನಿರ್ದೇಶಕ ಅನಿಲ್‌ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಜನಾರ್ಧನ್, ತಾಂತ್ರಿಕ ಅಧಿಕಾರಿ ರಶ್ಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net