

ಕೊಡಗು: ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ರೈತರ ಮೇಲೆ ಆಗುತ್ತಿರುವ ಶೋಷಣೆ ತಪ್ಪಿಸಬೇಕು, ಭ್ರಷ್ಟರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ರೈತರು, ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೋಮವಾರಪೇಟೆ ತಾಲೂಕು ಆಡಳಿತ ಸೌಧ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಹೋರಾಟಗಾರ ಬಿ.ಪಿ.ಅನಿಲ್‌ಕುಮಾರ್, ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್, ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ.ಮುದ್ದಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು. ಅರ್ಧ ಗಂಟೆ ತಹಸೀಲ್ದಾರ್ ಸ್ಥಳಕ್ಕೆ ಬಾರದೆ ಇದ್ದಾಗ, ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಇನ್ಸ್‌ಪೆಕ್ಟರ್ ರಾಮಚಂದ್ರನಾಯಕ್ ಅವರು ತಹಸೀಲ್ದಾರ್ ಎಸ್.ವಿ.ನರಗುಂದ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆತಂದರು. ಪೊಲೀಸ್ ಬಂದೋಬಸ್ತ್‌ನಲ್ಲಿ ತಹಸೀಲ್ದಾರ್ ಪ್ರತಿಭಟನಾಕಾರರ ಆಹವಾಲು ಆಲಿಸಿದರು.
ಮಧ್ಯಾಹ್ನದ ನಂತರ ಉಪವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳನ್ನು ವರ್ಗಾಯಿಸುವಂತೆ ಘೋಷಣೆಗಳನ್ನು ಮೊಳಗಿಸಿದರು. ಇದರಿಂದ ಯತೀಶ್ ಬಲ್ಲಾಳ್ ಕಸಿವಿಸಿಗೊಂಡು ಪ್ರತಿಭಟನಾಕಾರದೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಎಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.
ಅನೇಕ ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ರೈತರು ಸೇರಿದಂತೆ ಹಲವರಿಗೆ ಸಮಸ್ಯೆಯಾಗುತ್ತಿದೆ. ಅರ್ಜಿಗಳನ್ನು ವರ್ಷಗಟ್ಟಲೇ ಇಟ್ಟುಕೊಂಡಿರುವ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರನ್ನು ಅಮಾನತು ಮಾಡಬೇಕು. ಕಂದಾಯ ಇಲಾಖೆ ಪ್ರತಿಯೊಬ್ಬರನ್ನೂ ಕಾಲ ಕಾಲಕ್ಕೆ ವರ್ಗಾವಣೆ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಅವರನ್ನು ಒತ್ತಾಯಿಸಿದರು.
ಬೇಡಿಕೆಗಳನ್ನು ಆಲಿಸಿದ ಎಸಿ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.