ರೈತರ ಮಕ್ಕಳಿಗೆ ಮೀಸಲು ಹೆಚ್ಚಳಕ್ಕೆ ಪ್ರಸ್ತಾವ

27 Dwd 3
Published on

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಪ್ರವೇಶಕ್ಕೆ ಈವರೆಗೆ ರೈತರ ಮಕ್ಕಳಿಗೆ ಶೇ. 40ರಷ್ಟು ಮೀಸಲಾತಿ ಇತ್ತು. ಅದನ್ನು ಬರುವ ರಾಜ್ಯ ಬಜೆಟ್​ನಲ್ಲಿ ಶೇ. 50ಕ್ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ಸಹ ಕುಲಪತಿ ಬಿ.ಸಿ. ಪಾಟೀಲ ಹೇಳಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ 33ನೇ ಘಟಿಕೋತ್ಸವದಲ್ಲಿ ವಿವಿಧ ಪದವಿಗಳನ್ನು ಪ್ರದಾನ ಮಾಡಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ರಾಜ್ಯದ ಕೃಷಿ ವಿವಿಗಳ ಮಾನವ ಸಂಪನ್ಮೂಲದ ಕೊರತೆ ನಿಭಾಯಿಸಲು ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ನೂತನ ಸ್ಕೋರ್ ಕಾರ್ಡ್ ಅನ್ನು ಅನುಮೋದಿಸಲಾಗಿದೆ. ಕೃಷಿ ವಿವಿಯ ಅಧಿಕಾರಿಗಳ ನೇಮಕಾತಿಗೂ ಅನುಮತಿ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಶಿಕ್ಷಣಕ್ಕೆ ವಿದ್ಯಾರ್ಥಿನಿಯರೂ ಅಧಿಕವಾಗಿ ಸೇರುತ್ತಿದ್ದಾರೆ. ಆದರೆ, ಮಹಿಳಾ ಉದ್ದಿಮೆದಾರರ ಪ್ರಮಾಣ ಶೇ. 14 ಹಾಗೂ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ. 25ರಷ್ಟು ಮಾತ್ರ ಇದೆ. ಕೇವಲ ಶೇ. 2ರಷ್ಟು ಆಹಾರ ಸಂಸ್ಕರಣೆ ಇದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡದ ಹೊರತು ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಅಶುತೋಷ ಶರ್ಮಾ ವರ್ಚುವಲ್ ವೇದಿಕೆಯಲ್ಲಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಿದರು. ಪ್ರಧಾನಮಂತ್ರಿಗಳ ಕನಸಿನ ಸಶಕ್ತ ಭಾರತ, ಆತ್ಮನಿರ್ಭರ ಭಾರತ ನಿರ್ವಿುಸಲು ಪದವೀಧರರು ಕಾರ್ಯೋನ್ಮುಖರಾಗಬೇಕು. ರಾಷ್ಟ್ರೀಯ ಜಿಡಿಪಿಯಲ್ಲಿ ಶೇ. 14ರಷ್ಟು ಪಾಲು ಹೊಂದಿರುವ ಕೃಷಿ ಕ್ಷೇತ್ರ ಶೇ. 41.5ರಷ್ಟು ಜನರಿಗೆ ಉದ್ಯೋಗ ಒದಗಿಸಿದೆ. ಅಧಿಕ ನೀರು ಬಳಕೆ ಮತ್ತು ಅಧಿಕ ರಸಾಯನಿಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಕಡಿವಾಣ ಹಾಕಿ ಜಾಗತಿಕ ತಾಪಮಾನ ಬದಲಾವಣೆ ಹಾಗೂ ಹಸಿರುಮನೆ ಪರಿಣಾಮಗಳಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳಬೇಕು. ರೈತನ ಆದಾಯ ದ್ವಿಗುಣಗೊಳಿಸಲು ಕೊಯ್ಲೋತ್ತರ ನಿರ್ವಹಣೆಯ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಕುಲಪತಿ ಡಾ. ಮಹದೇವ ಚೆಟ್ಟಿ ಸ್ವಾಗತಿಸಿ, ವಿಶ್ವವಿದ್ಯಾಲಯದ ಸಂಕ್ಷಿಪ್ತ ವರದಿ ಮಂಡಿಸಿದರು. ಕುಲಸಚಿವ ರಮೇಶ ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು, ಸಂಶೋಧನೆ ನಿರ್ದೇಶಕ ಡಾ. ಪಿ.ಎಲ್. ಪಾಟೀಲ, ವಿವಿಧ ನಿಕಾಯಗಳ ಡೀನ್​ಗಳು, ವಿದ್ಯಾವಿಷಯಕ ಪರಿಷತ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಚಿನ್ನದ ಹುಡುಗ ಜಯಂತ ಕಲ್ಲುಗುಡಿ: ಬಿ.ಎಸ್​ಸಿ ಸ್ನಾತಕ ವಿದ್ಯಾರ್ಥಿ ಜಯಂತ ಕಲ್ಲುಗುಡಿ, ಚಿನ್ನದ ಹುಡುಗನಾಗಿ ಹೊರಹೊಮ್ಮಿದ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಬಿ.ಎಸ್​ಸಿ (ಕೃಷಿ) ವಿದ್ಯಾರ್ಥಿ ಜಯಂತ ಕಲ್ಲುಗುಡಿ 4 ವರ್ಷಗಳ ಕೃಷಿ ಸ್ನಾತಕ ಪದವಿಯಲ್ಲಿ 9.26 ಒಜಿಪಿಎ ಅಂಕ ಗಳಿಸಿದ್ದಾರೆ. ಈ ಸಾಧನೆಗೆ ಕೃಷಿ ವಿವಿ ಚಿನ್ನದ ಪದಕ, ಸೀತಾರಾಂ ಜಿಂದಾಲ್ ಫೌಂಡೇಷನ್​ನ ಚಿನ್ನದ ಪದಕ ಹಾಗೂ ದಿ. ಪ್ರೊ. ಆರ್.ಎಫ್. ಪಾಟೀಲ ಸ್ಮಾರಕ ನಗದು ಪುರಸ್ಕಾರಕ್ಕೆ ಜಯಂತ ಭಾಜನರಾದರು. ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಬೂದನೂರು ಗ್ರಾಮದ ಜಯಂತ ಅವರ ತಂದೆ ಕಾಮರಾಜ ಶಿಕ್ಷಕರು, ತಾಯಿ ಲಕ್ಷ್ಮೀದೇವಿ ಗೃಹಿಣಿ. ಇವರು ಬೆಂಗಳೂರಿನ ನೆಲಮಂಗಲದ ದಾಬಸ್​ಪೇಟೆಯಲ್ಲಿ ನೆಲೆಸಿದ್ದಾರೆ. ಜಯಂತನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಅಜ್ಜ- ಅಜ್ಜಿ, ತಂದೆ- ತಾಯಿ ಸಮಾರಂಭದಲ್ಲಿ ಸಾಕ್ಷಿಯಾದರು. ತಮ್ಮ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಜಯಂತ, ‘ಧಾರವಾಡದಲ್ಲಿ ಕೃಷಿ ಪದವಿ ಓದಬೇಕೆಂಬ ಮಹದಾಸೆ ಇತ್ತು. ಅಜ್ಜ ಕೃಷಿಕರಾಗಿದ್ದು, ಈಗಲೂ ಜಮೀನು ಇದೆ. ಒಣಭೂಮಿಯನ್ನು ತಾಂತ್ರಿಕತೆಯ ಮೂಲಕ ಅಭಿವೃದ್ಧಿಪಡಿಸುವ ಯೋಜನೆ ಇದೆ. ಸದ್ಯ ನವದೆಹಲಿಯ ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್​ಸ್ಟಿಟ್ಯೂಟ್​ನಲ್ಲಿ ಎಂ.ಎಸ್​ಸಿ ಕೃಷಿ ಓದುತ್ತಿದ್ದೇನೆ. ಪಿಎಚ್.ಡಿ ಮಾಡಿ ವಿಜ್ಞಾನಿಯಾಗುವ ಗುರಿ ಇದೆ. ಇಲ್ಲದಿದ್ದರೆ ಯುಪಿಎಸ್​ಸಿ ಕೋಚಿಂಗ್ ಸೇರಿ ಉನ್ನತ ಅಧಿಕಾರಿಯಾಗುವ ಕನಸೂ ಇದೆ. ಅದು ಈಡೇರಿದರೆ ಆ ಮೂಲಕವೇ ಕೃಷಿಕರಿಗೆ ನೆರವಾಗುತ್ತೇನೆ. ತಂತ್ರಜ್ಞಾನದಲ್ಲಿ ಭಾರತ ವಿದೇಶಗಳಿಗಿಂತ ಕಡಿಮೆ ಇಲ್ಲ. ಆದರೆ, ತಾಂತ್ರಿಕತೆ ಹಾಗೂ ಮಾನವ ಸಂಪತ್ತನ್ನು ಬುದ್ಧಿವಂತಿಕೆಯಿಂದ ಬಳಸುವುದು ಇಂದಿನ ಅನಿವಾರ್ಯತೆ ಮತ್ತು ಜವಾಬ್ದಾರಿ’ ಎಂದರು.

890 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: 33ನೇ ಘಟಿಕೋತ್ಸವದಲ್ಲಿ 890 ವಿದ್ಯಾರ್ಥಿಗಳಿಗೆ ಸಚಿವ ಬಿ.ಸಿ. ಪಾಟೀಲ ವಿವಿಧ ಪದವಿ ಪ್ರದಾನ ಮಾಡಿದರು. 789 ಅಭ್ಯರ್ಥಿಗಳು ಹಾಜರಾತಿ ಹಾಗೂ 104 ಅಭ್ಯರ್ಥಿಗಳು ಗೈರು ಹಾಜರಾತಿಯಲ್ಲಿ ಪದವಿ ಸ್ವೀಕರಿಸಿದರು. ಕೃಷಿ 202, ಅರಣ್ಯ 3, ಗೃಹವಿಜ್ಞಾನ 15, ಎಂಬಿಎ (ಕೃಷಿ ವ್ಯವಹಾರ ಹಾಗೂ ನಿರ್ವಹಣೆ) 9, ಆಹಾರ ತಾಂತ್ರಿಕತೆ 3 ಸೇರಿ 232 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. 40 ಅಭ್ಯರ್ಥಿಗಳಿಗೆ ಪಿಎಚ್.ಡಿ ಹಾಗೂ 38 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಟಿಕಾಯತ್ ನಿರ್ಬಂಧ ಚಿಂತನೆ ಇಲ್ಲ:

ಧಾರವಾಡ: ರೈತ ಹೋರಾಟಗಾರ ರಾಕೇಶಸಿಂಗ್ ಟಿಕಾಯತ್ ಕರ್ನಾಟಕಕ್ಕೆ ಆಗಮಿಸುವುದನ್ನು ನಿರ್ಬಂಧಿಸುವ ಚಿಂತನೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕಾಯತ್ ಬಂದು ಇಲ್ಲಿ ಧರಣಿ ಮಾಡುವಂಥದ್ದು ಏನೂ ಇಲ್ಲ. ಮಧ್ಯಪ್ರದೇಶದಂತೆ ಟಿಕಾಯತ್ ಪ್ರವೇಶ ನಿರ್ಬಂಧಿಸುವ ಚಿಂತನೆ ಇಲ್ಲ. ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಉದ್ಭವವಾಗಿಲ್ಲ. ರಾಜ್ಯವು ಶಾಂತಿ, ನೆಮ್ಮದಿಯಿಂದ ಇದೆ. ರೈತ ಸಂಘಟನೆಗಳು ಹೋರಾಟದ ತಯಾರಿಗೆ ಸಭೆಗಳನ್ನು ಮಾಡಿದರೆ ಮಾಡಲಿ. ಸಂಘಟನೆ ಮಾಡುವುದು, ಸಭೆ ಮಾಡುವುದು ಅವರ ಹಕ್ಕು ಎಂದರು.

ಅಗತ್ಯವೆನಿಸಿದರೆ ತನಿಖೆ: ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ಗುತ್ತಿಗೆ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟ ಪ್ರಕಟಣವನ್ನು ಅವಶ್ಯಕತೆ ಬಿದ್ದರೆ ತನಿಖೆ ಮಾಡಿಸಲಾಗುವುದು ಎಂದು ಸಚಿವರು ಹೇಳಿದರು. ಎಲ್ಲಿಯೋ ಹೋದಾಗ ಅಪಘಾತವಾದರೆ ವಿಶ್ವವಿದ್ಯಾಲಯ ಹೊಣೆಯಾಗುವುದಿಲ್ಲ. ಖಾಸಗಿ ಜೀವನದಲ್ಲಿ ಪ್ರವಾಸಕ್ಕೆ ಹೋದಾಗ ಅಪಘಾತವಾದರೆ ವಿವಿ ಹೇಗೆ ಹೊಣೆಯಾಗುತ್ತದೆ? ಅಪಘಾತಕ್ಕೂ ಕಿರುಕುಳಕ್ಕೂ ಏನು ಸಂಬಂಧ? ಒತ್ತಾಯಪೂರ್ವಕವಾಗಿ ಕರೆದೊಯ್ದರೆ ಅಪಘಾತ ಮಾಡಿಸಲು ಸಾಧ್ಯವೇ? ಎಂದು ಮರು ಪ್ರಶ್ನಿಸಿದರು.

ಆಮಿಷವೊಡ್ಡಿ ಗೋವಾಕ್ಕೆ?: ಕೃಷಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರು ಜ. 31ರಂದು ಬಾಗಲಕೋಟೆಗೆ ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿದ್ದರು. ನಂತರ ಗೋವಾಕ್ಕೆ ಹೋಗಿದ್ದರು. ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ. ಚೆಟ್ಟಿ ಅವರ ಕಾರ್ಯದರ್ಶಿ ಎಂ.ಎ. ಮುಲ್ಲಾ ಎಂಬವರ ಕಾರ್​ನಲ್ಲಿ ರೇಖಾ, ಮೇಘನಾ ಹಾಗೂ ಕಂಪ್ಯೂಟರ್ ಆಪರೇಟರ್ ಉಳವಪ್ಪ ತೆರಳಿದ್ದರು. ವಾಪಸ್ ಬರುತ್ತಿದ್ದ ವೇಳೆ ಅಂಕೋಲಾ ಬಳಿ ಅಪಘಾತ ಸಂಭವಿಸಿ ರೇಖಾ, ಮೇಘನಾ ಮೃತಪಟ್ಟಿದ್ದಾರೆ. ಮೃತ ಯುವತಿಯರ ಕೆಲಸ ಮುಂದುವರಿಸಲು ಎಂ.ಎ. ಮುಲ್ಲಾ ಕಿರುಕುಳ ನೀಡಿದ್ದಲ್ಲದೆ, ಗುತ್ತಿಗೆ ಕೆಲಸ ಮುಂದುವರಿಸುವ ಆಮಿಷವೊಡ್ಡಿ ಗೋವಾಕ್ಕೆ ಕರೆದೊಯ್ದಿದ್ದರು ಎಂಬ ಆರೋಪ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net