

ಅರಸೀಕೆರೆ: ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರ ಭೂಮಿಗೆ ಸರ್ಕಾರ ಕೂಡಲೇ ಮಂಜೂರಾತಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ರೈತ ಮುಖಂಡರು ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಪಾದಯಾತ್ರೆ ಮೂಲಕ ತೆರಳಿದರು.
ಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ,ಅರಸೀಕೆರೆ ಹಾಗೂ ಬೇಲೂರು ತಾಲೂಕಿನ ವಿವಿಧೆಡೆ ಅಂದಾಜು 2580 ಎಕರೆ ಸರ್ಕಾರಿ ಭೂಮಿಯನ್ನು ಕಳೆದ ಹತ್ತಾರು ವರ್ಷಗಳಿಂದ ರೈತರು ಬುಗರ್ ಹುಕ್ಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ.ಸ್ವಂತ ಜಮೀನು ಇಲ್ಲದ ಕಾರಣ ರಾಜ್ಯ ಸರ್ಕಾರ ಭೂ ಮಂಜೂರಾತಿಗೆ ಆದೇಶ ನೀಡುವ ಮೂಲಕ ಬಡ ರೈತರ ಜೀವನಕ್ಕೆ ದಾರಿ ಮಾಡಿಕೊಡಬೇಕು.ಈ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರದಿದ್ದರೆ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ನಗರದ ಬಸವೇಶ್ವರ ವೃತ್ತದಲ್ಲಿ ಕಿಡಿಕಾರಿದರು.
ತಿಪಟೂರು ಮಾರ್ಗ ವಾಗಿ ಕಿಬ್ಬನಹಳ್ಳಿ ಕ್ರಾಸ್,ನಿಟ್ಟೂರು,ಗುಬ್ಬಿ, ತುಮಕೂರು,ಡಾಬಸ್ ಪೇಟೆ, ಯಶವಂತಪುರ, ಮಲ್ಲೇಶ್ವರ ಮಾರ್ಗವಾಗಿ ಜ.9 ರಂದು ಸೋಮವಾರ ಬೆಳಿಗ್ಗೆ ಬೆಂಗಳೂರಿನ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.
ರೈತ ಸಂಘದ ಗೌರವ ಅಧ್ಯಕ್ಷ ಜವನಹಳ್ಳಿ ನಿಂಗಪ್ಪ , ಜಿಲ್ಲಾ ಸಂಚಾಲಕ ಅಯೂಬ್ ಪಾಷ, ಜಿಲ್ಲಾ ಕಾರ್ಯಧ್ಯಕ್ಷ ಎಜಾಜ್ ಪಾಷಾ, ಬಾಣಾವಾರ ಬೀರಪ್ಪ,ಮೊಹಮ್ಮದ್ ದಸ್ತಗೀರ್,ಕುಶಾಲ್ ಕುಮಾರ್, ಶಾಂತಕುಮಾರ್, ರೋಷನ್. ರಮೇಶ್ ,ಬೇಲೂರು ಮಂಜುನಾಥ್ ,ಹನುಮಂತು,ವಕೀಲ ವೆಂಕಟೇಶ್ ,ಶಾಂತಮ್ಮ , ರಂಗಸ್ವಾಮಿ ,ರಾಮಚಂದ್ರು ಹಾಗೂ ಇನ್ನಿತರರು ಭಾಗವಸಿದ್ದರು. ತಾಲೂಕಿನ ಕನಕಂಚೇನಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜಿ ಸಲ್ಲಿಸುವ ಮೂಲಕ ಪಾದಯಾತ್ರೆಗೆ ವಿದ್ಯುಕ್ತವಾಗಿ ನೀಡಲಾಯಿತು.