ರೈತರ ಭೂಮಿ ವಶಕ್ಕೆ ಅರಣ್ಯ ಇಲಾಖೆ ಯತ್ನ

18sri-3
Published on

ಶೃಂಗೇರಿ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅನುಪ್ ಸಂಜೋಗ್‌ಗೆ ಮನವಿ ಸಲ್ಲಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ತಾಲೂಕಿನ ಸರ್ಕಾರಿ ಪ್ರದೇಶವನ್ನು ಪ್ರಸ್ತಾವಿತ 41ಅರಣ್ಯದ ನಕಾಶೆ ತಯಾರಿಸಿದ್ದು, ಈ ಪ್ರದೇಶವನ್ನು ಮೀಸಲು ಅರಣ್ಯವೆಂದು ಘೋಷಣೆ ಮಾಡುವಾಗ ರೈತರು, ಕೃಷಿ ಕಾರ್ಮಿಕರು ಹಾಗೂ ವಾಸವಾಗಿರುವ ಮನೆಯನ್ನು ಹೊರತುಪಡಿಸಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸೆಕ್ಸನ್ 4.1ರಿಂದ ಮೀಸಲು ಅರಣ್ಯ ಎಂದು ಘೋಷಣೆ ಮಾಡುವಾಗ ರೈತರು, ಕೃಷಿ ಕಾರ್ಮಿಕರು ಜಮೀನಿಗೆ ಸಂಬಧಿಸಿದ ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದು, ಅದಕ್ಕೆ ರೈತರು ಈ ಹಿಂದೆ ಅರ್ಜಿಸಲ್ಲಿಸಿ ಹಿಂಬರಹ ಪಡೆದಿದ್ದಾರೆ. ಆದರೆ ಇದುವರೆಗೂ ವ್ಯವಸ್ಥಾಪನಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ಈ ಜಾಗವನ್ನೂ ಮೀಸಲು ಅರಣ್ಯ ಎಂದು ಎಂದು ಘೋಷಣೆ ಮಾಡಲು ಇಲಾಖೆ ಪ್ರಯತ್ನಿಸುತ್ತಿದೆ. ರೈತರು ಹಾಗೂ ಜನಸಾಮಾನ್ಯರು ನೀಡಿದ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಅವರ ಬದುಕಿಗೆ ತೊಂದರೆಯಾಗದಂತೆ ಇಲಾಖೆ ಮಾನವೀಯತೆಯಿಂದ ವರ್ತಿಸಬೇಕು ಎಂದರು.

ತಾಲೂಕು ರೈತಸಂಘದ ಮಾಜಿ ಅಧ್ಯಕ್ಷ ಕೆಲವಳ್ಳಿ ಗುಂಡಪ್ಪ ಮಾತನಾಡಿ, ತಾಲೂಕಿನ ಸರ್ಕಾರಿ ಕಂದಾಯ ಜಮೀನುಗಳ ಪಹಣಿಯಲ್ಲಿ ಸೊಪ್ಪಿನಬೆಟ್ಟ ನಮೂದಿಸಿ ಅರ್ಜಿ ನಂ. 50, 53, 67 ಮತ್ತು 94ಸಿ ಇತ್ಯಾದಿ ಮಂಜೂರಾತಿಗಾಗಿ ಹಕ್ಕುಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಇಲಾಖೆ ಹೇಳುತ್ತಿದೆ. ಕಾನೂನಿನಲ್ಲಿ ತಿದ್ದುಪಡಿ ಮಾಡಿ ರೈತರು ಹಾಗೂ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಸರ್ಕಾರ ನೀಡಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜನವರಿ 20ರಂದು ತಾಲೂಕಿನಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತಸಂಘದ ಪದಾಧಿಕಾರಿಗಳಾದ ಬಂಡ್ಲಾಪುರ ಶ್ರೀಧರ್‌ರಾವ್,ಪೂರ್ಣೇಶ್, ಚೆನ್ನಕೇಶವ, ಚಂದ್ರಪ್ಪ, ಜಗದೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net