ರೈತರ ಬೇಡಿಕೆಗಳನ್ನು ಈಡೇರಿಸುವ ನಿರ್ಣಯ ಕೈಗೊಳ್ಳಲಿ

Hallikerehundi bhagyaraj
Published on

ಚಾಮರಾಜನಗರ: ಮೈಸೂರಿನಲ್ಲಿ ಡಿ.31 ರಂದು ನಡೆಯಲಿರುವ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರ ಸಾಲ ಮನ್ನಾ, ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣ, ಆನ್‌ಲೈನ್ ಗೇಮ್ ನಿಷೇಧ ಸೇರಿದಂತೆ ಇತರೆ ಹಲವು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲು ನಿರ್ಣಯ ಕೈಗೊಳ್ಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹಿಸಿದರು.

ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳ ಬಗ್ಗೆ ವಿಸ್ತ್ರತ ಚರ್ಚೆಗಳಾಗಬೇಕು. ಅಲ್ಲದೇ ಈ ಸಂದರ್ಭದಲ್ಲಿ ರೈತರ ಹಕ್ಕೊತ್ತಾಯಗಳನ್ನು ಚುನಾಯಿತ ಪ್ರತಿನಿಧಿಗಳಿಗೆ ಸಲ್ಲಿಸುವ ಕೆಲಸ ಮಾಡಬೇಕು.ಟನ್ ಕಬ್ಬಿಗೆ 5500 ರೂ. ದರ ನಿಗದಿ ಮಾಡಬೇಕು. ಅಕ್ರಮ ಸಕ್ರಮ ಯೋಜನೆ ಮರು ಜಾರಿಯಾಗಬೇಕು. ರೈತರು ಬೆಳೆದ ಭತ್ತವನ್ನು ಯಾವುದೇ ಷರತ್ತುಗಳಿಲ್ಲದೇ ಖರೀದಿ ಮಾಡಬೇಕು. ರೈತರ ಹಿತ ಕಾಯಲು ಲೀಟರ್ ಹಾಲಿಗೆ ಕನಿಷ್ಟ 50 ರೂ. ನಿಗದಿ ಮಾಡಬೇಕು. 5 ರೂ.ಗಳ ಪ್ರೋತ್ಸಾಹಧನ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಬೇಕು. ಕೇಂದ್ರ ಸರ್ಕಾರ ಕೂಡಲೇ ದೇಶದ ರೈತರ ಸಾಲ ಮನ್ನಾ ಮಾಡಬೇಕು ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೈಗಾರಿಕಾ ಪ್ರದೇಶಗಳಿಗೆ ವಶಪಡಿಸಿಕೊಳ್ಳುವ ರೈತರ ಭೂಮಿ ಸಂಬಂಧ, ಆ ರೈತನನ್ನು ಪಾಲುದಾರರಾಗಿ ನೇಮಿಸಿಕೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಖಾಸಗಿ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ಸೂಕ್ತ ಕ್ರಮವಹಿಸಬೇಕು. ಭೂಮಿ, ನೀರು, ಆಹಾರ ಸಂರಕ್ಷಣೆಗೆ ರೈತರಿಗೆ ತಾಂತ್ರಿಕ ಸಲಹೆ ಕೊಡುವ ಕೆಲಸವಾಗಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರ್ಷ, ಜಿಲ್ಲಾಧ್ಯಕ್ಷ ನಾಗರಾಜು, ಜಿಲ್ಲಾ ಕಾರ್ಯದರ್ಶಿ ಮಹೇಂದ್ರಕುಮಾರ್, ಉಪಾಧ್ಯಕ್ಷ ಪ್ರವೀಣ್, ಉಡಿಗಾಲ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡ ಪ್ರಕಾಶ್ ಗಾಂಧಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net