

ಕೊಳ್ಳೇಗಾಲ: ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿದೆ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸುವ ಬದಲು ನಾಲೆಗಳ ಮೂಲಕ ಕೆರೆ-ಕಟ್ಟೆ ತುಂಬಿಸಿದರೆ ಅಂತರ್ಜಲ ಅಭಿವೃದ್ಧಿ ಹೊಂದುವ ಜತೆಗೆ ಕೃಷಿಗೂ ಅನುಕೂಲವಾಗಲಿದೆ ಎಂಬುದು ಈ ಭಾಗದ ರೈತರ ಬೇಡಿಕೆ.
ತಾಲೂಕಿನಾದ್ಯಂತ ರೈತರು ಕಬ್ಬು, ಅರಿಶಿನ, ಜೋಳ, ಉದ್ದು, ಹೆಸರುಕಾಳು, ಅಲಸಂದೆ ಇನ್ನಿತರ ಬೆಳೆಯನ್ನು ಜಮೀನಿನಲ್ಲಿ ಬಿತ್ತಿದ್ದಾರೆ. ಸಮೃದ್ಧ ಬೆಳೆಗೆ ನೀರು ಅವಶ್ಯಕತೆ ಇದೆ. ಆಗಾಗಿ ಕಬಿನಿ ಜಲಾಶಯದಿಂದ ನಾಲೆಗಳ ಮೂಲಕ ನೀರನ್ನು ಹರಿಬಿಟ್ಟು ಈ ಭಾಗದ ಕೆರೆಕಟ್ಟೆಗಳಿಗೆ ತುಂಬಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಕುಂತೂರು ಕೆರೆ, ತೇರಂಬಳ್ಳಿ ಕೆರೆ, ಕುಣಗಳ್ಳಿ ಕೆರೆ, ಚಿಕ್ಕ ರಂಗನಾಥ ಕೆರೆ, ದೊಡ್ಡರಂಗನಾಥ ಕೆರೆ, ಪಾಪನ ಕೆರೆ ಧನಗೇರಿ ಕೆರೆ, ಸರಗೂರು ಕೆರೆ, ಪಾಳ್ಯದ ಕೆರೆ, ಹೊಂಡ ರಬಾಳು ಕೆರೆ ಹೀಗೆ ಇತ್ಯಾದಿ ಕೆರೆಗಳು ಹಾಗೂ ಕಟ್ಟೆಗಳು ರೈತರ ಜೀವನಾಡಿಯಾಗಿದ್ದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ. ಅಂತರ್ಜಲ ಅಭಿವೃದ್ಧಿಗೊಳ್ಳಲು ಸಹಕಾರಿಯಾಗಿದೆ.
ಈ ಹಿನ್ನೆಲೆ ಸರ್ಕಾರ ಹಾಗೂ ನೀರಾವರಿ ಅಧಿಕಾರಿಗಳು ಮಳೆಯಿಂದ ಸಂಗ್ರಹವಾದ ನೀರನ್ನು ನದಿಗೆ ಹರಿಸಿ ತಮಿಳುನಾಡಿಗೆ ಸೇರಿಸುವ ಬದಲು ಕೃಷಿಗೆ ಜೀವಾಳವಾಗಿರುವ ಕೆರೆ, ಕಟ್ಟೆಗಳಿಗೆ ಜರೂರಾಗಿ ತುಂಬಿಸಬೇಕು. ಪ್ರತಿ ವರ್ಷವೂ ರೈತರ ಒತ್ತಾಯ ಹಾಗೂ ಹೋರಾಟಗಳ ಬಳಿಕ ನೀರನ್ನು ನಾಲೆಗಳಿಗೆ ಬಿಡಲಾಗುತ್ತದೆ.
ಇದರಿಂದ ಪರಿಣಾಮಕಾರಿಯಾಗಿ ಪ್ರಯೋಜನ ಆಗುವುದಿಲ್ಲ. ಕೃಷಿ ಚುಟವಟಿಕೆಗಳು ನಡೆಯುತ್ತಿರುವಾಗಲೇ ನಾಲೆಗಳಿಗೆ ನೀರನ್ನು ಬಿಟ್ಟರೆ ರೈತರಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ಕೆರೆ, ಕಟ್ಟೆಗಳಲ್ಲಿ ನೀರು ತುಂಬಿದ್ದರೆ ಅಂತರ್ಜಲ ಅಭಿವೃದ್ಧಿಗೆ ಅನುಕೂಲವಾಗಲಿದೆ.
ಹೂಳೆತ್ತದೆ ಮಳೆ ನೀರಿಂದ ಕೆರೆ ತುಂಬಲ್ಲ: ತಾಲೂಕಿನ ಎಲ್ಲ ಕೆರೆಗಳು ಹೂಳಿನಿಂದ ಭರ್ತಿಯಾಗಿದೆ. ಹಿಂದೆಲ್ಲ ಮಳೆಯಿಂದಲೇ ಕೆರೆಗಳು ಭರ್ತಿ ಆಗುತ್ತಿದ್ದವು. ಆದರೀಗ ಆ ಪರಿಸ್ಥಿತಿ ಇಲ್ಲ. ಮಳೆಬಿದ್ದು ಬೆಟ್ಟ ಗುಡ್ಡ, ಹಳ್ಳ-ಕೊಳ್ಳದಿಂದ ಹರಿದು ಬರುತ್ತಿದ್ದ ನೀರಿನ ಹಳ್ಳಗಳು ಮುಚ್ಚಿ ಹೋಗಿದೆ. ಕಾರಣ ಮಳೆ ನೀರಿನಿಂದ ಸಮರ್ಪಕವಾಗಿ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಿಲ್ಲದಂತೆ ಆಗಿದೆ. ಆಗಾಗಿ ಕಬಿನಿ ನಾಲೆಗಳಿಂದ ಅಧಿಕಾರಿಗಳು ಸಕಾಲಕ್ಕೆ ಕೆರೆ, ಕಟ್ಟೆ ತುಂಬಿಸಬೇಕೆಂಬುದು ರೈತರ ಮಾತಾಗಿದೆ.
ಜಲಾಶಯದಿಂದ ಹೆಚ್ಚುವರಿ ನೀರನ್ನು ವ್ಯರ್ಥವಾಗಿ ನದಿಗೆ ಬಿಟ್ಟು ತಮಿಳುನಾಡಿಗೆ ಹರಿಸದೆ ಕೃಷಿ ಅನುಕೂಲಕ್ಕೆ ನೀರನ್ನು ನಾಲೆಗಳ ಮೂಲಕ ಬಿಟ್ಟು ಕೆರೆ, ಕಟ್ಟೆ ತುಂಬಿಸಿದರೆ ಬಹಳ ಉಪಯೋಗವಾಗಲಿದೆ. ಜನಪ್ರತಿನಿಧಿಗಳು ಹಾಗೂ ಕಬಿನಿ ನೀರಾವರಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಗೌಡೇಗೌಡ ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಕಾವೇರಿ ಕಣಿವೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಬಿನಿ, ಕೆಆರ್‌ಎಸ್ ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. ಹಾಗಾಗಿ ಅಧಿಕಾರಿಗಳು ಮೀನಮೇಷ ಎಣಿಸದೆ ನಾಲೆಗಳ ಮೂಲಕ ಕೆರೆ, ಕಟ್ಟೆಗಳನ್ನು ತುಂಬಿಸಲಿ. ಇದರಿಂದ ಅಂತರ್ಜಲ ಅಭಿವೃದ್ಧಿ ಆಗುತ್ತದೆ. ರೈತರಿಗೆ ಅನುಕೂಲವಾಗುತ್ತದೆ. ಶೈಲೇಂದ್ರ ಶ್ರೀಕಂಠಸ್ವಾಮಿ ಜಿಲ್ಲಾ ಕಾರ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ನಾಲೆಗಳಲ್ಲಿ ಜಂಗಲ್ ಕಟ್ಟಿಂಗ್ ಕಾರ್ಯ ಪ್ರಗತಿಯಲ್ಲಿದೆ. ಜೂನ್ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ನಾಲೆಗಳಿಗೆ ನೀರು ಹಾಯಿಸಿ ಕೆರೆ, ಕಟ್ಟೆ ತುಂಬಿಸುವ ಬಗ್ಗೆ ಮುಂದೆ ಜಿಲ್ಲಾ ಉಸ್ತುವಾರಿಗಳ ನೇತೃತ್ವದಲ್ಲಿ ಸಭೆಯಲ್ಲಿ ನಿರ್ದೇಶನ ಸಿಗಲಿದೆ. ಈ ವೇಳೆ ಈ ಭಾಗದ ರೈತರಿಗೆ ಅನುಕೂಲವಾಗುವ ಈ ನಿಟ್ಟಿನಲ್ಲಿ ಕೆರೆ ಕಟ್ಟೆ ತುಂಬಿಸಲು ಅವಕಾಶ ಸಿಗಲಿದೆ. ಕಳೆದ ಬಾರಿಗಿಂದ ಈ ಬಾರಿ ತ್ವರಿತವಾಗಿ ನೀರು ಬಿಡುವ ಸಾಧ್ಯತೆ ಹೆಚ್ಚಿದೆ. ಜಿ.ಜೆ ಈರಣ್ಣ, ಪ್ರಭಾರ ಕಾರ್ಯಪಾಲಕ ಇಂಜಿನಿಯರಿಂಗ್, ಕಾವೇರಿ ನೀರಾವರಿ ನಿಗಮ. ಕಬಿನಿ ಜಲಾಶಯದಿಂದ 25 ಸಾವಿರ ಮತ್ತು ಕೆಆರ್‌ಎಸ್ ನಿಂದ 1 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಮಳೆಯಿಂದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಕೆರೆ, ಕಟ್ಟೆಗಳಲ್ಲಿ ನೀರು ಬಿಡುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಆಗಲಿದೆ. ರೈತರ ಒತ್ತಾಯದಂತೆ ಕೆರೆ, ಕಟ್ಟೆಗೆ ನೀರು ಬಿಡುವ ವಿಚಾರವಾಗಿ ನೀರಾವರಿ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಬಿ.ಆರ್.ಮಹೇಶ್ ಉಪವಿಭಾಗಾಧಿಕಾರಿ, ಕೊಳ್ಳೇಗಾಲ ಮಳೆಯಿಂದ ಕಬಿನಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಈ ಸಮಯದಲ್ಲಿ ಸಾಮಾನ್ಯವಾಗಿ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತದೆ. ನಾಲೆಗಳಿಂದ ಕೆರೆ, ಕಟ್ಟೆ ನೀರು ಹರಿಸುವ ಸಂಬಂಧ ಜುಲೈ ತಿಂಗಳಲ್ಲಿ ನೀರಾವರಿ ಅಧಿಕಾರಿಗಳ ಸಭೆ ನಡೆಸಲಾಗುವುದು. ನಂತರ ನಾಲೆಗಳ ಮೂಲಕ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತದೆ. ಕೆ.ವೆಂಕಟೇಶ್, ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಚಾಮರಾಜನಗರ