ರೈತರ ಬೆಳವಣಿಗೆಯಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವದ್ದು

12.npk-2
Published on

ನಾಪೋಕ್ಲು: ರೈತರ ಬೆಳವಣಿಗೆಯಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವವಾಗಿದ್ದು, ಅವುಗಳ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಕೆ ಜಿ ಬೋಪಯ್ಯ ಹೇಳಿದರು.


ಸಮೀಪದ ನಂ. 94ನೇ ನೆಲಜಿ ಸಹಕಾರ ದವಸ ಭಂಡಾರ ನಿಯಮಿತದ ನವೀಕೃತಗೊಂಡ ಕಟ್ಟಡ ಸಂಕೀರ್ಣಗಳ ಹಾಗೂ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ 53 ದವಸ ಭಂಡಾರಗಳು ಅಸ್ತಿತ್ವದಲ್ಲಿದೆ. ಸಹಕಾರಿ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಬೇಕು. ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದರು. ಅತಿ ಸುಲಭದಲ್ಲಿ ರೈತರಿಗೆ ಸಹಕಾರಿ ಸಂಘಗಳ ಮೂಲಕ ಸಾಲ ಸೌಲಭ್ಯ ಸಿಗುತ್ತಿದ್ದು, ರೈತರ ಬೆಳವಣಿಗೆಯಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ. ಇಂತಹ ಸಹಕಾರಿ ಸಂಘಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಹಕಾರಿ ಸಂಘಗಳನ್ನು ಬೆಳೆಸುವಲ್ಲಿ ಅನೇಕ ಹಿರಿಯ ಚೇತನಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.


ವಿವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೊರ ಸಭಾಂಗಣ ಉದ್ಘಾಟಿಸಿ ಮಾತನಾಡಿ, ರೈತರ ಅಭಿವೃದ್ಧಿ ಆಗಬೇಕಾದರೆ ಸಹಕಾರಿ ಸಂಘಗಳ ಅಗತ್ಯವಿದೆ. ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಯಿಂದ ಸ್ಥಳೀಯ ಬ್ಯಾಂಕುಗಳ ಅಭಿವೃದ್ಧಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಿ.ಗಣಪತಿ ಮಾತನಾಡಿ, ನೆಲಜಿ ಗ್ರಾಮದ ಸಹಕಾರಿಗಳ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಇದು ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಬೇಕು. ಸಹಕಾರ ಸಂಘಗಳು ಭದ್ರವಾಗಿದ್ದರೆ ಮಾತ್ರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.


ಮಾಜಿ ಅಡಿಷನಲ್ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮಾತನಾಡಿ, ಸಹಕಾರ ಸಂಘಗಳನ್ನು ಸ್ಥಾಪಿಸುವುದು ಸಹಕಾರಿಗಳ ಮೂಲಭೂತ ಹಕ್ಕಾಗಿದ್ದು, ಇದರಲ್ಲಿ ಸರ್ಕಾರಿ ಅಧಿಕಾರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. 27 ಲಕ್ಷ ರೂ. ವೆಚ್ಚದಲ್ಲಿ ನೆಲೆಜಿಯ ಸಹಕಾರಿ ಸಂಘವನ್ನು ಪುನಶ್ಚೇತನ ಮಾಡಿರುವುದು ಹೆಮ್ಮೆಯ ವಿಷಯ. ಇದು ಸಹಕಾರಿ ವ್ಯವಸ್ಥೆಯ ಯಶಸ್ಸಿಗೆ ಒಂದು ಉದಾಹರಣೆಯಾಗಿದೆ. ಸಹಕಾರಿ ವ್ಯವಸ್ಥೆ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಶೇ.85ರಷ್ಟು ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ನೆಲಜಿ ಸಹಕಾರಿ ಕ್ಷೇತ್ರವು ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು. ನೆಲಜಿ ಸಹಕಾರ ದವಸ ಭಂಡಾರದ ಅಧ್ಯಕ್ಷ ಬಾಳಿಯಡ ಸಿ. ಕುಂಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿವೃತ್ತ ಡಿ.ಎಫ್.ಒ.ಮುಕ್ಕಾಟಿರ ಎಂ.ಜಯ, ಕ್ರೀಡಾ ಸಮಿತಿ ಅಧ್ಯಕ್ಷ ಅಪ್ಪುಮಣಿಯಂಡ ಸನ್ನು ಸೋಮಣ್ಣ, ನಬಾರ್ಡ್ ನಿವೃತ್ತ ಡಿಡಿಎಂ ಮುಂಡಂಡ ಸಿ.ನಾಣಯ್ಯ, ನೆಲಜಿ ನಾಡು ಮರಣ ಫಂಡ್ ಅಧ್ಯಕ್ಷ ಮಣವಟ್ಟಿರ ಎಂ.ಚೆಂಗಪ್ಪ, ಉದ್ಯಮಿ ಮಂಡಿರ ಎ.ಜಯದೇವಯ್ಯ, ದಾನಿಗಳಾದ ಬಾಳಿಯಡ ಸಿ.ಪ್ರಕಾಶ್ ನಾಣಯ್ಯ ಅಚ್ಚಾಂಡಿರ ಬಿ.ಅರುಣ್ ಭೀಮಯ್ಯ, ಸಮಾರಂಭದ ಸಮಿತಿಯ ಪದಾಧಿ ಕಾರಿಗಳು ಮತ್ತು ಸಮಿತಿ ಸರ್ವ ಸದಸ್ಯರು ಇತರರು ಇದ್ದರು.


ಮುಕ್ಕಾಟಿರ ಎಂ.ವಿನಯ್ ಕಾರ್ಯಕ್ರಮ ನಿರೂಪಿಸಿದರು. ಮುಂಡಂಡ ನಂಜುಂಡ ದವಸ ಭಂಡಾರದ ಕಿರು ಪರಿಚಯ ಮಾಡಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮುಂಡಂಡ ನಂಜಪ್ಪ ಪ್ರಾಥಮಿಕ ನುಡಿ ಹಾಡಿದರು. ಬದಂಜೆಟ್ಟೀರ ಎ.ತಿಮ್ಮಯ್ಯ ವಂದಿಸಿದರು. ಬಳಿಕ ಸಂಜೆ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net