ರೈತರ ಬೆನ್ನೆಲುಬಾದ ಮಾಜಿ ಡಿಸಿಎಂ ಸವದಿ - ಡಾ. ಮಹಾಂತಪ್ರಭು ಸ್ವಾಮೀಜಿ

Published on

ತೆಲಸಂಗ: ಅಥಣಿ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಕಾಮಗಾರಿಗಳ ಮೂಲಕ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕವೇ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶೇಗುಣಶಿ ಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ 63ನೇ ಜನ್ಮದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಚಿಂತನಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರೈತ ಕುಟುಂಬದಿಂದ ಬೆಳೆದು ಬಂದಿರುವ ಲಕ್ಷ್ಮಣ ಸವದಿ ಅವರು ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿಸಲು, ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಿರಂತರ ಶ್ರಮಿಸುತ್ತಿದ್ದಾರೆ. ರೈತನ ಮಗನಾಗಿರುವುದರಿಂದ ಅವರ ಸಮಸ್ಯೆ ಬಹುಬೇಗನೆ ತಿಳಿದುಕೊಂಡು ಶಾಶ್ವತವಾಗಿ ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, 30 ವರ್ಷದಿಂದ ನಮ್ಮನ್ನು ಉಡಿಯಲ್ಲಿ ಹಾಕಿಕೊಂಡು ಬೆಳೆಸಿದ ಅಥಣಿ ಜನತೆಯ ಬೆನ್ನೆಲುಬಾಗಿ ಎಂದೆಂದಿಗೂ ಇರುತ್ತೇವೆ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ. ಪಕ್ಷಕ್ಕೆ ಮತ್ತು ಜನತೆಯ ಹಿತಕ್ಕೆ ಬದ್ಧರಾಗಿದ್ದೇವೆ. ಅಥಣಿಯನ್ನು ಮಾದರಿ ಕ್ಷೇತ್ರವನ್ನಾಗಿಸುವುದೇ ಲಕ್ಷ್ಮಣ ಸವದಿ ಅವರ ದೊಡ್ಡ ಕನಸಾಗಿದ್ದು, ಅದನ್ನು ಸಂಕಲ್ಪ ಮಾಡಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೊಬ್ಬರು ಮಾನವತಾವಾದಿ. ಬಡವರು, ರೈತರ, ಸರ್ವಜನಾಂಗದ ಅಭಿವೃದ್ಧಿಯೇ ಮೂಲಮಂತ್ರವೆಂದು ನಿಸ್ವಾರ್ಥದಿಂದ ದುಡಿಯುತ್ತಿದ್ದಾರೆ. ರಾಜಕಾರಣಿಯೊಬ್ಬ ಅಧ್ಯಾತ್ಮದ ಜೀವನದೊಂದಿಗೆ ಸತ್ಯಮಾರ್ಗದಲ್ಲಿ ನಡೆಯುವ ರಾಜ್ಯದ ಏಕೈಕ ರಾಜಕಾರಣಿ ಎಂದರೆ ಸವದಿ ಎಂದು ಬಣ್ಣಿಸಿದರು. ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ದುರಗಪ್ಪ ಅಂಗಡಿ, ಸಿದರಾಯ ಯಲ್ಲಡಗಿ, ಚಂದ್ರಶೇಕರ ನೇಮಗೌಡ, ಗುರಪ್ಪ ದಾಶ್ಯಾಳ ಸೇರಿ ತಾಲೂಕು ಮತ್ತು ಸ್ಥಳೀಯ ಬಹುತೇಕ ಗಣ್ಯರು ಪಾಲ್ಗೊಂಡಿದ್ದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಎಲ್ಲರೊಂದಿಗೆ ಬೆರೆಯುವ ಸರಳಜೀವಿ. ಸಂಸ್ಕಾರ, ಆಚಾರ, ನೀತಿ, ಸೀದಾ ಸಾದಾ ವ್ಯಕ್ತಿತ್ವ, ಪ್ರಾಮಾಣಿಕತೆ ಹೊಂದಿದ ಏಕೈಕ ನಾಯಕ. ಅಥಣಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.| ವೀರೇಶ್ವರ ದೇವರು, ಹಿರೇಮಠ ತೆಲಸಂಗ.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬರಲಿಲ್ಲ. ರಾಜಕೀಯ ಸೇವಾಕ್ಷೇತ್ರ ಎಂದು ತಿಳಿದು ಅಥಣಿ ಹೆಸರನ್ನು ರಾಜ್ಯದಲ್ಲಿ ಮಿಂಚುವಂತೆ ಮಾಡಿದ್ದು, ಒಬ್ಬ ರಾಜಕಾರಣಿ ಹೇಗಿರಬೇಕು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ.| ಅಮೋಘಸಿದ್ದ ಖೋಬ್ರಿ, ನ್ಯಾಯವಾದಿ ತೆಲಸಂಗ

ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಜತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್, ಅತಿವೃಷ್ಟಿ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಜನರ ಬೆನ್ನಿಗೆ ನಿಂತು ಸಹಾಯ ಮಾಡಿದ್ದಾರೆ. ಅಥಣಿ ಜನರ ಆರೋಗ್ಯ ಕಾಳಜಿ ಒಬ್ಬ ಹದಯವಂತ ಸಾಹುಕಾರನಿಂದ ಮಾತ್ರ ಕಾಣಲು ಸಾಧ್ಯವಿದೆ.| ಚಂದ್ರಶೇಖರ ನೇಮಗೌಡ, ಬಿಜೆಪಿ ಮುಖಂಡ ಐಗಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net