

ಚನ್ನರಾಯಪಟ್ಟಣ : ಕೃಷಿ ಜತೆಗೆ ಉಪ ಕಸುಬಾಗಿ ಹೈನುಗಾರಿಕೆಯನ್ನು ಅಳವಡಿಸಿಕೊಂಡಿರುವ ರೈತರು ತಮ್ಮ ಬದುಕನ್ನು ಸದೃಡವಾಗಿ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಎ.ಚೋಳೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 15 ಲಕ್ಷ ರೂ. ವೆಚ್ಚದ ಬಲ್ಕ್ ಮಿಲ್ಕ್ ಕೂಲಿಂಗ್ ಸೆಂಟರ್(ಬಿಎಂಸಿ) ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ 20-25 ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದ ಪರಿಣಾಮ ಕೃಷಿಯನ್ನೇ ನಂಬಿದ್ದ ರೈತವರ್ಗವು ಸಂಕಷ್ಟಕ್ಕೆ ಸಿಲುಕಿದ್ದು ಬದುಕು ಕಟ್ಟಿಕೊಳ್ಳಲು ಹೈನುಗಾರಿಕೆಯನ್ನು ಆಯ್ಕೆ ಮಾಡಿಕೊಂಡಿತ್ತು. ಇದರಿಂದ ಮಕ್ಕಳ ಶಿಕ್ಷಣ, ಕೃಷಿ ಹಾಗೂ ಮನೆ ನಿರ್ವಹಣೆಯನ್ನು ಸುಲಭವಾಗಿ ನಿಭಾಯಿಸಿ ಬದುಕನ್ನು ಸದೃಡಗೊಳಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕಳೆದ 3-4 ವರ್ಷಗಳಿಂದ ಹಿರೀಸಾವೆ-ಜುಟ್ಟನಹಳ್ಳಿ, ನುಗ್ಗೇಹಳ್ಳಿ, ಬಾಗೂರು, ನವಿಲೆ ಹಾಗೂ ಕಲ್ಲೇಸೋಮನಹಳ್ಳಿ ಏತನೀರಾವರಿ ಯೋಜನೆಯಡಿ ತಾಲೂಕಿನ ನೂರಾರು ಕೆರೆಗಳನ್ನು ತುಂಬಿಸಲಾಗುತ್ತಿದ್ದು ಇದರಿಂದ ಅಂತರ್ಜಲ ಚೇತರಿಕೆ ಕಂಡಿದೆ. ಇನ್ನು ಈ ಬಾರಿ ಪೂರ್ವ ಮುಂಗಾರಿನಿಂದಲೂ ನಿರೀಕ್ಷೆ ಮೀರಿದಂತೆ ಮಳೆಯಾಗುತ್ತಿದ್ದು ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿವೆ ಎಂದು ತಿಳಿಸಿದರು.
ಸಂಘದ ಬಿಎಂಸಿ ಕಟ್ಟಡದ ನಿರ್ಮಾಣಕ್ಕೆ ಕೆಎಂಎಫ್ ವತಿಯಿಂದ 4.5 ಲಕ್ಷ ರೂ., ಹಾಸನ ಹಾಲು ಒಕ್ಕೂಟದಿಂದ 2 ಲಕ್ಷ ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.5 ಲಕ್ಷ ರೂ. ಸಹಾಯಧನ ಲಭ್ಯವಾಗಲಿದ್ದು ಉಳಿಕೆ ಮೊತ್ತವನ್ನು ಸಂಘದಿಂದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ, ಆರ್‌ಎಂಸಿ ನಿರ್ದೇಶಕ ಅನಿಲ್‌ಕುಮಾರ್, ಸಂಘದ ಉಪಾಧ್ಯಕ್ಷ ರಮೇಶ್, ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಸಿ.ಸಿ.ಯೋಗೇಶ್, ಕಾರ್ಯದರ್ಶಿ ಭರತ್‌ಕುಮಾರ್, ನಿರ್ದೇಶಕರು ಹಾಗೂ ಇತರರು ಇದ್ದರು.