

ಚಾಮರಾಜನಗರ: ದೇವನಹಳ್ಳಿ ತಾಲೂಕಿನಲ್ಲಿ ಅಕ್ರಮ ಭೂ ಸ್ವಾಧೀನ ವಿರೋಧಿಸಿ ನಡೆದ ಚಳವಳಿಯಲ್ಲಿ ಧರಣಿ ನಿರತರ ರೈತರ ಮೇಲೆ ದೌರ್ಜನ್ಯ ನಡೆಸಿ ಬಂಧನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಜನನ ಮಂಟಪದ ಬಳಿ ಇರುವ ರೈತ ಸಂಘದ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ರಥದ ಬೀದಿ, ಶ್ರೀಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಕೆಐಎಡಿಬಿ ಸುಮಾರು 1774 ಎಕರೆ ಲವತ್ತಾದ ಭೂಮಿಯನ್ನು ರೈತರಿಂದ ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನ ಮಾಡುತ್ತಿದೆ. ಕೆಐಎಡಿಬಿ ನಡೆಸುತ್ತಿರುವ ಅಕ್ರಮ ಭೂಸ್ವಾಧೀನವನ್ನು ವಿರೋಧಿಸಿ ರೈತ ಮುಖಂಡರು ಹಾಗೂ ಚೆನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ದೇವನಹಳ್ಳಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಚಳುವಳಿಯ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ರೈತರನ್ನು ಬಂಧನ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
ರೈತರು ನ್ಯಾಯಬದ್ಧವಾಗಿ ಪ್ರತಿಭಟನೆ ನಡೆಸುತ್ತಿರುವ ವೇಳೆಯಲ್ಲಿ ಪೊಲೀಸ್ ಉಪ ಆಯುಕ್ತ ಸಚಿತ್‌ಕುಮಾರ್ ಅವರು ಕರ್ತವ್ಯ ಲೋಪವೆಸಗಿ ಅಕ್ರಮ ಮತ್ತು ಅಮಾನುಷವಾಗಿ ರೈತರ ಮೇಲೆ ದೌರ್ಜನ್ಯನಡೆಸಿದ್ದಾರೆ. ಧರಣಿನಿತರ ರೈತರನ್ನು ಬಂಧಿಸಿದ್ದಾರೆ. ಆಗಾಗಿ ಸಚಿತ್‌ಕುಮಾರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಚೆನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಟ್ಟು ಅಲ್ಲಿನ ರೈತರ ಭೂಮಿಯನ್ನು ಅವರಿಗೆ ಉಳಿಸಬೇಕು.ಈ ಸಂಬಂಧ ಮುಖ್ಯಮಂತ್ರಿಗಳು ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಚಿನ್ನಸ್ವಾಮಿ, ಶಿವಪುರ ಮಹದೇವಪ್ಪ, ಲೋಕೇಶ್, ಕುಮಾರ್, ವಿಜಯ್‌ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.