

ಕೊಳ್ಳೇಗಾಲ: ತಾಲೂಕಿನ ಬೂದಗಟ್ಟದೊಡ್ಡಿ ಗ್ರಾಮದಲ್ಲಿ ಸಾಗುವಳಿ ಮಾಡುತ್ತಿದ್ದ ಜಮೀನುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿರುವುದನ್ನು ಖಂಡಿಸಿ ನೂರಾರು ರೈತರು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪಟ್ಟಣದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಕಚೇರಿ ಮುಂದೆ ಸಂತ್ರಸ್ತ ರೈತರು ಹಾಗೂ ರೈತ ಸಂಘದವರು ಧರಣಿ ಹಮ್ಮಿಕೊಂಡು 33 ದಿನಗಳು ಕಳೆದಿವೆ. ರೈತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ತಿಂಗಳಿನಿಂದ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಣಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ರೈತರು ನಂತರ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮುಂದುವರಿಸಿದ್ದಾರೆ. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ, ಮುಖಂಡರಾದ ಮಧುವನಹಳ್ಳಿ ಬಸವರಾಜು, ಗುರುಮಲ್ಲೇಶ್, ಮುರುಗೇಶ್, ನಿಕೋಲಸ್ ಜಾನ್ ಕೆನಡಿ, ಚಾರ್ಲಿ, ಜೊಯೆಲ್, ಮುರುಗನ್, ಸತ್ತಿವೇಲು, ಅಪ್ಪು, ವೆಂಕಟರಾವ್ ಭೋವಿ, ಚಂದ್ರಭೋವಿ, ಮಾದಮ್ಮ ಇತರರು ಇದ್ದರು.