ರೈತರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ

ರೈತರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ
Published on

ಹಾಸನ: ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ, ರೈತರ ಆತ್ಮಹತ್ಯೆ ತಡೆಗಟ್ಟಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ರೈತರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಘು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದ ಕಾರ್ಯಭಾರ ನೋಡಿದರೆ ಹಿಂದಿನ ಬಿಜೆಪಿ ಸರ್ಕಾರಕ್ಕೂ ಇವರಿಗೂ ಏನೂ ವ್ಯತ್ಯಾಸ ಇಲ್ಲ ಅನ್ನಿಸಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣ ದುರುಪಯೋಗ ಆಗಿದೆ. ರೈತರ ಆತ್ಮಹತ್ಯೆ ಸರಣಿಗೆ ತಡೆ ಬಿದ್ದಿಲ್ಲ. ಇದೆಲ್ಲದಕ್ಕೂ ಕಡಿವಾಣ ಬೀಳಬೇಕು ಎಂಬುದು ನಮ್ಮ ಆಗ್ರಹ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಂದರು.
ರೈತರು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯುವ ವೆಚ್ಚವನ್ನು ಅವರ ಮೇಲೆಯೇ ಹೇರಿರುವುದು ಖಂಡನೀಯ. ಇದರಿಂದ ರೈತರಿಗೆ ಹೊರೆಯಾಗಿದೆ. 2-3 ಲಕ್ಷವನ್ನು ರೈತರು ಭರಿಸಲು ಕಷ್ಟವಾಗಿದೆ. ಹಾಗಾಗಿ ಸರ್ಕಾರ ಈ ತೀರ್ಮಾನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಗೃಹ ವಿದ್ಯುತ್ ಬಾಕಿ ಮನ್ನಾ ಮಾಡಬೇಕು. 2023 ಏಪ್ರಿಲ್‌ನಿಂದ ಈವರೆಗೆ 1182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಈ ಆತ್ಮಹತ್ಯೆ ತಡೆಗೆ ಪೂರಕ ಕಾರ್ಯಕ್ರಮ ರೂಪಿಸಿ, ರೈತ ಸಮುದಾಯಕ್ಕೆ ಆತ್ಮಸ್ಥೆರ್ಯ ತುಂಬಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ನಿಗದಿ ಮಾಡಬೇಕು. ಬ್ಯಾಂಕುಗಳ ಸಾಲ ವಸೂಲಾತಿ ಕಿರುಕುಳ ತಪ್ಪಿಸಬೇಕು ಎಂದು ಆಗ್ರಹಿಸಿದರು.
ರೈತರ ಎಲ್ಲಾ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆ ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆಹಾನಿ ನಿರ್ಧರಿಸಬೇಕು. ವಿಮಾ ಕಂಪನಿಗಳು ಉಳಿಸಿಕೊಂಡಿರುವ ಬಾಕಿ ನೀಡಬೇಕು. ಬರ, ವಿಮಾ ಪರಿಹಾರದ ಹಣವನ್ನೂ ಬ್ಯಾಂಕ್‌ನವರು ಸಾಲಕ್ಕಾಗಿ ಜಮಾ ಮಾಡುವುದು ತಪ್ಪಬೇಕು ಎಂದು ಆಗ್ರಹಿಸಿದರು.
ವನ್ಯಜೀವಿ ಹಾಳಿಯಿಂದಾಗಿರುವ ಬೆಳ್ಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಕೊಬ್ಬರಿ, ಕಬ್ಬು ಬೆಳೆಗಾರರ ಹಿತ ಕಾಯಬೇಕು. ಭೂ-ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ನಿಷೇದ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಸರ್ಕಾರ ಹಾಲಿನ ದರ 2+2=4 ರೂ ಕಡಿಮೆ ಮಾಡಿದೆ ಮತ್ತು ಪ್ರೋತ್ಸಾಹ ಧನವನ್ನು ಹಲವು ತಿಂಗಳಿಂದ ಬಾಕಿ ಉಳಿಸಿ ಕೊಂಡಿದೆ. ತಿಂಗಳ ಪೇಮೆಂಟ್ ಕೊಡುತ್ತಿಲ್ಲ, ಕೊಡಲೇ ದರ ಹೆಚ್ಚಿಸಿ ಮತ್ತು ಬಾಕಿಯಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ಎಲ್ಲಾ ಬೇಡಿಕೆ ಈಡೇರಿಸದೇ ಇದ್ದರೆ ಹೋರಾಟ ಅನಿವಾರ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ನರಸಿಂಹಶೆಟ್ಟಿ, ಶಿವು, ದಿನೇಶ್‌ಗೌಡ, ಸೋಮಶೇಖರ್, ವಾಜೀದ್ ಬೇಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net