

ತಿಪಟೂರು: ರೈತರಿಂದ ಸಂಗ್ರಹಿಸಲಾಗುವ ಸೆಸ್ ಹಣದಿಂದ ನಗರದ ಎಪಿಎಂಸಿ ಕೊಬ್ಬರಿ ಮಾರುಕಟ್ಟೆ ಪ್ರಾಂಗಣದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಲು ಉದ್ದೇಶಿಸಿರುವ 4.10 ಕೋಟಿ ರೂಪಾಯಿ ವೆಚ್ಚದ ಆಡಳಿತ ಭವನ ನಿರ್ಮಾಣ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇಬ್ಬರು ಸಿಬ್ಬಂದಿಗೆ ಇಷ್ಟೊಂದು ವೆಚ್ಚದ ಭವನ ಅಗತ್ಯವಿದೆಯೇ ಎಂಬುದು ಪ್ರಶ್ನೆ. ಮಾರುಕಟ್ಟೆಯಲ್ಲಿ ಸುಸಜ್ಜಿತ ರೈತ ಭವನ ಇದೆ. ಅಧ್ಯಕ್ಷ, ಕಾರ್ಯದರ್ಶಿಗಳ ಕೊಠಡಿ, ಕಚೇರಿ ಸಿಬ್ಬಂದಿಗೆ ವಿಶಾಲವಾದ ಕಚೇರಿ, ಕಂಪ್ಯೂಟರ್ ರೂಂಗಳೂ ಇವೆ. ಜತೆಗೆ ವಿಶಾಲ ಸಭಾಂಗಣ, ರೈತರು ಉಳಿದುಕೊಳ್ಳಲು ಪ್ರತ್ಯೇಕ ಹಾಗೂ ಹೆಚ್ಚುವರಿಯಾಗಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಖಾಲಿ ಇರುವ ಎರಡು ಕೊಠಡಿಗಳನ್ನು ಸಣ್ಣ ನೀರಾವರಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಬಾಡಿಗೆ ರೂಪದಲ್ಲಿ ಕೊಡಲಾಗಿದೆ. ಇದರ ಜತೆಗೆ ಹಳೇ ರೈತ ಭವನವನ್ನು ಕಚೇರಿ ಬಳಕೆಗೆ ಬಳಸಿಕೊಳ್ಳುವ ಉದ್ದೇಶದಿಂದ 2013ರಲ್ಲಿ ಅಂದಾಜು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದ್ದು ಅಂದಿನಿಂದ ಇಲ್ಲಿಯವರೆಗೂ ನವೀಕೃತ ಕಟ್ಟಡ ನಿರುಪಯುಕ್ತವಾಗಿದೆ.
ವರ್ಷದಿಂದ ವರ್ಷಕ್ಕೆ ರೈತರಿಂದ ಸಂಗ್ರಹವಾಗುತ್ತಿದ್ದ ಸೆಸ್ ಕಡಿಮೆಯಾಗುತ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಸ್ಥಳೀಯ ಎಪಿಎಂಸಿ ವಹಿವಾಟಿಗೆ ಅನುಗುಣವಾಗಿ ಇಲ್ಲಿನ ಕಚೇರಿಗೆ 29 ಸಿಬ್ಬಂದಿ ನಿಯೋಜನೆಗೆ ಮಂಜೂರಾತಿ ಇದ್ದರೂ ಕರ್ತವ್ಯ ನಿರ್ವಹಿಸುತ್ತಿರುವುದು ಇಬ್ಬರು ಮಾತ್ರ. ಇದರಲ್ಲೂ ಹಾಲಿ ಕಾರ್ಯದರ್ಶಿ, ರಾಜ್ಯ ಕೃಷಿ ಮಾರುಕಟ್ಟೆ ಉಪ ನಿರ್ದೇಶಕ ರಾಜಣ್ಣ ಅವರನ್ನು ಪ್ರಭಾರ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಬೆಂಗಳೂರು ಮತ್ತು ತಿಪಟೂರು ಎರಡೂ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಪ ಕಾರ್ಯದರ್ಶಿ ದರ್ಜೆಯ ಅಧಿಕಾರಿಯದ್ದೂ ಇದೇ ಪಾಡಾಗಿದ್ದು, ಶಿರಾ ಮತ್ತು ತಿಪಟೂರು ಎರಡೂ ಕಡೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಇವರದ್ದು.
ಇಷ್ಟೆಲ್ಲ ಕೊರತೆಗಳ ನಡುವೆ ಹಠಕ್ಕೆ ಬಿದ್ದವರಂತೆ ಹಾಲಿ ಇರುವ ರೈತಭವನದ ಎದುರು ಇರುವ ತೆಂಗಿನ ಕಾಯಿ ಬಹಿರಂಗ ಹರಾಜಿಗೆ ಮೀಸಲಾಗಿರುವ ಜಾಗದಲ್ಲಿ ಆಡಳಿತ ಭವನ ನಿರ್ಮಿಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಭವನ ನಿರ್ಮಾಣ ವಿರೋಧಿಸಿ ರೈತ ಭವನದಲ್ಲಿ ಇತ್ತೀಚೆಗೆ ರೈತರ ಸಭೆ ಕೂಡ ನಡೆದಿದೆ.
ಎಪಿಎಂಸಿ ಆದಾಯ ಕಡಿಮೆ: ಎಪಿಎಂಸಿ ಆರ್ಥಿಕ ಸ್ಥಿತಿ ಚೆನ್ನಾಗಿದ್ದಾಗ ನಗರದ ಬಸ್ ಡಿಪೋ ಪಕ್ಕದಲ್ಲಿ 2015ರಲ್ಲಿ ರೈತರಿಗಾಗಿ ಅಂದಾಜು 7.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಣ್ಣು, ಹೂ, ಮತ್ತು ತರಕಾರಿ ಮಾರುಕಟ್ಟೆ ಮತ್ತು ಇದರ ಸುತ್ತ ನಿರ್ಮಿಸಲಾಗಿರುವ ಹೋಟೆಲ್ ಕಟ್ಟಡ ಸೇರಿ 35ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ ಪ್ರತೀ ತಿಂಗಳು 8 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿತ್ತು. ಇದರ ಪ್ರಕಾರ ಇಲ್ಲಿಯವರೆಗೂ ಸಂಗ್ರಹವಾಗಬೇಕಿದ್ದ 6.5 ಕೋಟಿ ಬದಲಿಗೆ ಕೇವಲ 2 ಲಕ್ಷ ರೂಪಾಯಿ ಎಂದರೆ ಯಾರೂ ನಂಬಲಾರರು.
ಹಠಕ್ಕೆ ಬಿದ್ದವರಂತೆ ಕಾಣುತ್ತಿದೆ... : 2005ರಿಂದಲೂ ಬಹಿರಂಗ ಹರಾಜಿಗೆ ಮೀಸಲಾಗಿರುವ 30 ಗುಂಟೆ ಜಾಗದಲ್ಲಿ ಆಡಳಿತ ಕಚೇರಿ ಕಟ್ಟಲು ವಿರೋಧ ವ್ಯಕ್ತಪಡಿಸುತ್ತಲೇ ಇದ್ದೇವೆ. ಉದ್ಯಾನವನದ ಎದುರಿನ ಹಳೆಯ ಭವನದಲ್ಲಿ ಆಡಳಿತ ಕಚೇರಿ ಸಲುವಾಗಿ 2013ರಲ್ಲಿ 25 ಲಕ್ಷ ರೂಪಾಯಿ, 2017ರಲ್ಲಿ ಹೆಚ್ಚುವರಿಯಾಗಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನವೀಕರಿಸಲಾಗಿದೆ, ಸುಸಜ್ಜಿತ ಕಟ್ಟಡ ಈಗಲೂ ನಿರುಪಯುಕ್ತವಾಗಿದೆ. ಅಲ್ಲಿ ಆಡಳಿತ ಕಚೇರಿ ನಿರ್ವಹಿಸಲು ಇವರಿಗೆ ಏನು ಅಡ್ಡಿ ಎಂದು ತಿಳಿಯುತ್ತಿಲ್ಲ, ಜತೆಗೆ ಸೆಸ್ ಶೇ.2 ಇದ್ದಾಗ ವಾರ್ಷಿಕ 14 ಕೋಟಿ ಆದಾಯ ಬರುತ್ತಿತ್ತು, ಈಗ ಸೆಸ್ ದರವನ್ನು 65 ಪೈಸೆಗೆ ಇಳಿಸಿದ್ದು, ಎಪಿಎಂಸಿಗೆ ಸಂಗ್ರವಾಗುತ್ತಿದ್ದ ಸೆಸ್ 5 ಕೋಟಿಗೆ ಇಳಿದಿದೆ. ಜತೆಗೆ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಹಣ್ಣು, ಹೂವು ಮತ್ತು ತರಕಾರಿ ಮಾರುಕಟ್ಟೆಯಿಂದ ಮಾಸಿಕ 8 ಲಕ್ಷ ಬಾಡಿಗೆ ಬದಲಿಗೆ ಇಲ್ಲಿವರೆಗೂ ಸಂಗ್ರಹವಾಗಿರುವುದು ಕೇವಲ 2 ಲಕ್ಷ ರೂಪಾಯಿ. ದಿನದಿಂದ ಆದಾಯ ಕುಂಠಿತವಾಗುತ್ತಿದ್ದು, ಹಠಕ್ಕೆ ಬಿದ್ದವರಂತೆ ಅನವಶ್ಯವಾಗಿ ಆಡಳಿತ ಭವನ ನಿರ್ಮಿಸಲು ಹೊರಟಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್ ಹೇಳಿದರು.