ರೈತರ ಜೀವನಾಡಿ ಕೆರಗಳನ್ನು ಉಳಿಸಿ

kdr cpi meet
ಸಖರಾಯಪಟ್ಟಣ ಸಮೀಪದ ಜಾನಸಾಲೆ ಎಸ್ಟೇಟ್‌ನಲ್ಲಿ ಕ್ಯಾತನಬೀಡು ಪ್ರತಿಷ್ಠಾನ ಆಯೋಜಿಸಿದ್ದ ರೈತರ ಮನೆಯಂಗಳದಲ್ಲಿ ಅವರ ಸಮಸ್ಯೆಗಳು ಕುರಿತು ಚರ್ಚಿಸಲಾಯಿತು. ಗುರುಶಾಂತಪ್ಪ, ರವೀಶ್, ಡಿ.ಎಂ.ಮಂಜುನಾಥಸ್ವಾಮಿ ಇತರರಿದ್ದರು.
Published on

ಕಡೂರು: ಕೆರೆಗಳು ಉಳಿದರೆ ರೈತರ ಬದುಕು ಹಸನಾಗಲಿದೆ ಎಂದು ಕ್ಯಾತನಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್ ಕ್ಯಾತನಬೀಡು ತಿಳಿಸಿದರು.

ಸಖರಾಯಪಟ್ಟಣ ಸಮೀಪದ ಜಾನಸಾಲೆ ಎಸ್ಟೇಟ್‌ನಲ್ಲಿ ಕೃಷಿಕ ರವೀಶ್ ಅವರ ಮನೆಯಂಗಳದಲ್ಲಿ ಕ್ಯಾತನಬೀಡು ಪ್ರತಿಷ್ಠಾನ ಏರ್ಪಡಿಸಿದ್ದ ರೈತರ ಬದುಕು ಮತ್ತು ಸಮಸ್ಯೆಗಳ ಕುರಿತು ಸಭೆಯಲ್ಲಿ ಮಾತನಾಡಿ, ರೈತರು ಮಾತು ಮರೆತು ಮೌನಕ್ಕೆ ಶರಣಾದ ಹೊತ್ತಿನಲ್ಲಿ ಅವರ ನೋವು-ನಲಿವು ಹಂಚಿಕೊಳ್ಳುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ ಎಂದರು.

ಬಹಳ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದ ಲಕ್ಸಾಗರದ ಕೆರೆ ಈಗ ಕಂಡೂ ಕಾಣದಂತಾಗಿದೆ. ಕೆರೆಯನ್ನು ಪುನಶ್ಚೇತನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಕೆರೆ 50 ಎಕರೆಯಷ್ಟು ವಿಶಾಲವಾಗಿದ್ದು ಬಹಳಷ್ಟು ವರ್ಷಗಳ ಹಿಂದೆ ತುಂಬಿ ತುಳುಕುತ್ತಿತ್ತು. ಜಾನಸಾಲೆ ಮತ್ತು ಸುತ್ತಲ 20 ಕಿಮೀ. ವ್ಯಾಪ್ತಿಯ ರೈತರ ಜೀವನಾಡಿಯಾಗಿತ್ತು. ಆದರೆ ನೀಲಗಿರಿ ಮರಗಳ ತೋಪಾಗಿ ಅವಸಾನದ ಅಂಚಿನಲ್ಲಿದೆ. ರಾಜ್ಯ ಸರ್ಕಾರ ಲಕ್ಸಾಗರ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು. ಗುಡ್ಡಗಳ ನೀರು ಕೆರೆಗೆ ಹರಿಯುವಂತೆ ಮಾಡಬೇಕಿದೆ ಎಂದರು.

ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ, ಜಿಲ್ಲೆಯ ಎಲ್ಲ ನದಿಗಳೂ ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹರಿದು ಆ ನೆಲವನ್ನು ಸಂಪದ್ಭರಿತಗೊಳಿಸುತ್ತಿವೆ. ಆದರೆ ಅದರಿಂದ ನಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆರೆಕಟ್ಟೆಗಳು ದಿನೇ ದಿನೆ ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವತ್ತ ರೈತರು ಚಿಂತನೆ ಮಾಡಬೇಕಿದೆ. ಇತ್ತೀಚೆಗೆ ಕುಡಿಯುವ ನೀರು, ಆಹಾರ ವಿಷವಾಗಿವೆ. ಅವುಗಳನ್ನು ಸರಿಪಡಿಸಲು ರೈತರಿಂದ ಮಾತ್ರ ಸಾಧ್ಯ ಎಂದರು.

ಸಿಪಿಐ ರಾಜ್ಯ ಸಹಕಾರ್ಯದರ್ಶಿ ಅಮ್ಜದ್ ಮಾತನಾಡಿ, ರೈತರು ಈಗಲಾದರೂ ಎಚ್ಚೆತ್ತು ಭೂಮಿಯ ಫಲವತ್ತತೆ ಕಾಪಾಡಿಕೊಂಡು ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದರು.

ಸ್ಥಳೀಯ ಕೃಷಿಕ ನಿಂಗಪ್ಪ ಮಾತನಾಡಿ, ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ನೆಲ, ಜಲ ಉಳಿಸಿಕೊಳ್ಳಬಹುದು ಎಂದರು. ಕೃಷಿಕರಾದ ರವೀಶ್, ಎನ್.ಡಿ.ಚಂದ್ರಪ್ಪ, ಸಾಹಿತಿ ಡಿ.ಎಂ.ಮಂಜುನಾಥಸ್ವಾಮಿ, ಪಿಳ್ಳೇನಹಳ್ಳಿ ವಿಜಯಕುಮಾರ್, ಗಂಗಾಧರ್ ಶಿವಪುರ್ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net