ರೈತರ ಜಮೀನಿನ ರಸ್ತೆ ಕಾಮಗಾರಿ ಶೀಘ್ರವೇ ಆರಂಭ

30 NRD-1
Published on

StartFragment

ನರಗುಂದ: ಮಳೆ ಮತ್ತು ಪ್ರವಾಹದಿಂದ ತಾಲೂಕಿನಲ್ಲಿ ಸಾಕಷ್ಟು ಮನೆಗಳು ಬಿದ್ದಿವೆ. ಜಮೀನಿಗೆ ತೆರಳುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ತಕ್ಷಣವೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ ಸೂಚಿಸಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಬುಧವಾರ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಪಂ ಎಇಇ ಎಂ.ಡಿ. ತೂಗುಣಸಿ ಮಾತನಾಡಿ, ‘ಮಳೆಯಿಂದಾಗಿ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿದೆ. ಸದ್ಯದಲ್ಲೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಹಿರೇಕೊಪ್ಪದ ಕುಡಿಯುವ ನೀರಿನ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೊಣ್ಣೂರ ಮತ್ತು ಶಿರೋಳ ಗ್ರಾಮಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಪೂರ್ಣಗೊಂಡಿವೆ’ ಎಂದರು.

ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿ ಪಿ.ಎಸ್. ಪೊಲೀಸ್ ಪಾಟೀಲ ಮಾತನಾಡಿ, ‘ಭೈರನಹಟ್ಟಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಎರಡ್ಮೂರು ದಿನಗಳಲ್ಲಿ ಬಗೆಹರಿಸಲಾಗುವುದು’ ಎಂದರು. ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮಾತನಾಡಿ, ‘ಮಳೆ ಮತ್ತು ಪ್ರವಾಹದಿಂದಾಗಿ 3544 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಗೊಂಡಿವೆ. ತೇವಾಂಶ ಹೆಚ್ಚಳದಿಂದ ಅನೇಕ ಬೆಳೆಗಳು ಕೆಂಪು, ಹಳದಿ ರೋಗಕ್ಕೆ ತುತ್ತಾಗುತ್ತಿವೆ. ಶೇ.50ರಷ್ಟು ರೈತರು ಬೆಳೆ ಸಮೀಕ್ಷೆ ಮಾಡಿಕೊಂಡಿದ್ದಾರೆ. ಇನ್ನುಳಿದ ಬೆಳೆಗಳ ಸಮೀಕ್ಷೆಗೆ ಖಾಸಗಿಯವನ್ನು ನೇಮಿಸಲಾಗಿದೆ’ ಎಂದರು. ಜಿಲ್ಲೆಗೆ ಕಳೆದ ವರ್ಷದ 3 ಕೋಟಿ ರೂ. ಹತ್ತಿ ಬೆಳೆ ವಿಮೆ ಬಿಡುಗಡೆಯಾಗಿದೆ. ಸೂರ್ಯಕಾಂತಿ ಬೆಳೆ ವಿಮೆ ಬಗ್ಗೆ ಸಂಬಂಧಪಟ್ಟ ವಿಮೆ ಕಂಪನಿಗೆ ಮತ್ತೊಮ್ಮೆ ಪತ್ರ ಬರೆಯಲಾಗುವುದು ಎಂದರು.

ತಾಲೂಕು ಆರೋಗ್ಯಾಧಿಕಾರಿ ರೇಣುಕಾ ಕೊರವನವರ ಮಾತನಾಡಿ, ‘ತಾಲೂಕಿನಲ್ಲಿ ಇದುವರೆಗೆ 9800 ಜನರ ಕೋವಿಡ್ ತಪಾಸಣೆ ಮಾಡಲಾಗಿದೆ. ಕರೊನಾ ಸೋಂಕಿತರ ಚಿಕಿತ್ಸೆಗೆ ತಾಲೂಕಾಸ್ಪತ್ರೆಯಲ್ಲಿ 50 ಹಾಸಿಗೆ ಆಕ್ಸಿಜನ್ ಸೌಲಭ್ಯ ಕಲ್ಪಿಸಲಾಗಿದೆ. ವಿವಿಧ ಬೇಡಿಕೆ ಈಡೇರಿಕೆಗಾಗಿ ಆಸ್ಪತ್ರೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಮುಷ್ಕರ ಆರಂಭಿಸಿದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಆದರೆ, ಯಾರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿಲ್ಲ’ ಎಂದರು.

ಸಾಮಾನ್ಯ ಸಭೆಗೆ ಗೈರು ಹಾಜರಾದ ಲೋಕೋಪಯೋಗಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ವಿಠ್ಠಲ ತಿಮ್ಮರಡ್ಡಿ ಸೂಚಿಸಿದರು. ಇಒ ಸಿ.ಆರ್. ಕುರ್ತಕೋಟಿ ಮಾತನಾಡಿ, ‘ಮಳೆಯಿಂದ ತಾಲೂಕಿನಾದ್ಯಂತ ಸಾಕಷ್ಟು ಸಮಸ್ಯೆಗಳಾಗಿವೆ. ಏನಾದರೂ ಮಹತ್ವದ ಸಭೆಗಳಿದ್ದರೆ ತಿಳಿಸಿ ಹೋಗಬೇಕು. ಇಲ್ಲದಿದ್ದರೆ ಸಿಇಒ ಅವರಿಗೆ ವರದಿ ಸಲ್ಲಿಸಲಾಗುವುದು’ ಎಂದು ಸೂಚಿಸಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ಜಿಪಂ ಸದಸ್ಯೆ ರೇಣುಕಾ ಅವರಾದಿ, ಗಿರೀಶ ನೀಲರಡ್ಡಿ, ಟಿ.ಬಿ. ಶಿರಿಯಪ್ಪಗೌಡ್ರ, ಸಂಜೀವಕುಮಾರ ಚವ್ಹಾಣ, ರೂಪಾ ಗಂಧದ, ಪ್ರಭುಲಿಂಗಪ್ಪ ಎಲಿಗಾರ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net