ರೈತರ ಖಾತೆಗೆ ಜಮೆಯಾಗದ ಹಣ

10 lxr 1
Published on

ಲಕ್ಷ್ಮೇಶ್ವರ: ರೈತರು ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಮಾರಾಟ ಮಾಡಿ ಒಂದೂವರೆ ತಿಂಗಳು ಕಳೆದರೂ ಇದುವರೆಗೂ ರೈತರ ಖಾತೆಗೆ ಹಣ ಜಮೆ ಆಗದಿರುವುದು ರೈತ ಸಮುದಾಯದಲ್ಲಿ ಆತಂಕ ಉಂಟು ಮಾಡಿದೆ.

ರಾಜ್ಯದಲ್ಲಿ ಕರೊನಾ ಮಹಮಾರಿ ಆವರಿಸಿರುವ ಕಾರಣ ಇನ್ನೂ ಯಾವಾಗ ನಮ್ಮ ಖಾತೆಗೆ ಹಣ ಜಮೆ ಆಗುತ್ತದೆಯೋ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ವಾಣಿಜ್ಯ ಬೆಳೆ ಶೇಂಗಾ ಫಸಲು ರೈತರ ಕೈಗೆ ಬಂದು 5 ತಿಂಗಳ ನಂತರ ಫೆ. 2ನೇ ವಾರದಲ್ಲಿ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಸಂಘಕ್ಕೆ ಮಾರಾಟ ಮಾಡಿದ್ದರು. ಆದರೆ, ಅದಾಗಲೇ ಬಹುತೇಕ ರೈತರು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ (ಸರಾಸರಿ ಕ್ಷಿಂಟಾಲ್​ಗೆ 3500ರೂ.) ಮಾರಾಟ ಮಾಡಿದ್ದರು. ಆದರೆ, ಇನ್ನುಳಿದ ರೈತರು ಬೆಂಬಲ ಬೆಲೆ ಪ್ರಾರಂಭವಾಗುವವರೆಗೂ ಕಾದು ಪ್ರತಿ ಕ್ವಿಂಟಾಲ್​ಗೆ 5090 ರೂ. ದರದಂತೆ ಮಾರಾಟ ಮಾಡಿದ್ದರು. ಪ್ರತಿ ಎಕರೆಗೆ 6 ಕ್ವಿಂಟಾಲ್​ನಂತೆ ಪ್ರತಿ ರೈತರಿಂದ ಕನಿಷ್ಠ 15 ಕ್ವಿಂಟಾಲ್ ಶೇಂಗಾವನ್ನು ಕೆಒಎಫ್ ಖರೀದಿಸಿದೆ.

ಜಿಲ್ಲೆಯಲ್ಲಿ ಒಟ್ಟು 1963 ರೈತರು 11 ಕೋಟಿ 54 ಲಕ್ಷ 30 ಸಾವಿರದ 511 ಸಾವಿರ ರೂ. ಮೊತ್ತದ 64,794 ಚೀಲ ಶೇಂಗಾ ಮಾರಾಟ ಮಾಡಿದ್ದಾರೆ. ಸದ್ಯ ರೈತರು ಇದೇ ಹಣವನ್ನು ನಂಬಿದ್ದು ಯುಗಾದಿಯ ನಂತರ ನಡೆಯುವ ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ. ಈ ವೇಳೆ ರೈತರು ಜಮೀನನ್ನು ವಾರ್ಷಿಕ ಲಾವಣಿ, ಪಾಲಿನಂತೆ ಪಡೆಯಲು, ಸಾಲ ತೀರಿಸಲು ಇದೇ ಹಣದ ದಾರಿ ಕಾಯುತ್ತಿದ್ದಾರೆ. ರೈತರಿಗೆ ಯಾವುದೇ ಆದಾಯವೂ ಇಲ್ಲದೆ, ದುಡಿಮೆಯೂ ಇಲ್ಲದೆ ಕೈಯಲ್ಲಿ ಬಿಡಿಗಾಸಿಲ್ಲದೆ ಬೆಂಬಲ ಬೆಲೆಯಡಿ ಶೇಂಗಾ ಮಾರಾಟ ಮಾಡಿದ ಹಣಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಾ ನಿತ್ಯ ಬ್ಯಾಂಕ್, ಶೇಂಗಾ ಮಾರಾಟ ಮಾಡಿದ ಸಂಘ, ಅಧಿಕಾರಿಗಳನ್ನು ವಿಚಾರಿಸುತ್ತಿದ್ದಾರೆ.

ಶೇಂಗಾ ಮಾರಾಟ ಮಾಡಿ ಒಂದೂವರೆ ತಿಂಗಳೆ ಕಳೆದಿದ್ದರೂ ನಮ್ಮ ಖಾತೆಗೆ ಇದುವರೆಗೂ ಹಣ ಜಮೆ ಆಗಿಲ್ಲ. ಕರೊನಾದಿಂದಾಗಿ ಯಾವುದೇ ಕೆಲಸ ಇಲ್ಲದೆ ಕೈಯಲ್ಲಿ ಬಿಡಿಗಾಸಿಲ್ಲದಂತಾಗಿದೆ. ಕೃಷಿ ಚಟುವಟಿಕೆ, ಕೂಲಿ ಆಳುಗಳಿಗೆ ಕೊಡಲು, ಬದುಕು ಸಾಗಿಸಲು ಬಡ್ಡಿ ಸಾಲಕ್ಕೆ ಮೊರೆ ಹೋಗಬೇಕಾಗಿದೆ. ಸರ್ಕಾರ ಆದಷ್ಟು ಬೇಗ ರೈತರ ಖಾತೆಗೆ ಶೇಂಗಾ ಮಾರಾಟದ ದುಡ್ಡು ಜಮೆ ಮಾಡಬೇಕು.| ಮುದಕನಗೌಡ ಪಾಟೀಲ, ಎಸ್.ಜಿ. ಹುಳಕನವರ, ರೈತರು

ಈಗಾಗಲೇ ಸರ್ಕಾರ ಮೊದಲ ಕಂತಿನಲ್ಲಿ 3 ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಇಬ್ಬರು ರೈತರ ಖಾತೆಗೆ ಪ್ರಾಯೋಗಿಕವಾಗಿ ಹಣ ಜಮೆ ಮಾಡಿ ಸಾಧಕ-ಬಾಧಕ ಪರಿಶೀಲಿಸಲಾಗುತ್ತಿದೆ. ರೈತರ ಬೇರೆ ಬೇರೆ ಬ್ಯಾಂಕ್​ಗಳಲ್ಲಿ ಖಾತೆ ಹೊಂದಿದ್ದರೂ ಸಹ ಶೇಂಗಾ ಮಾರಾಟ ವೇಳೆ ಎಫ್​ಐಡಿ ನಂಬರಿಗೆ ನೋಂದಾಯಿಸಿಕೊಂಡಿರುವ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಆದಷ್ಟು ಬೇಗ ಶೇಂಗಾ ಮಾರಾಟ ಮಾಡಿದ ಎಲ್ಲ ರೈತರ ಖಾತೆಗೂ ಹಣ ಜಮೆ ಆಗುತ್ತದೆ ಈ ಬಗ್ಗೆ ಯಾವುದೇ ಆತಂಕ ಬೇಡ. | ಜಿ.ಎಚ್. ಪಾಟೀಲ ಜಿಲ್ಲಾ ಸಹಾಯಕ ವ್ಯವಸ್ಥಾಪಕ, ಕೆಒಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net