ರೈತರ ಕೈ ಸುಟ್ಟ ವಿಚಿತ್ರ ಆಲೂಗಡ್ಡೆ!?

ರೈತರ ಕೈ ಸುಟ್ಟ ವಿಚಿತ್ರ ಆಲೂಗಡ್ಡೆ!?
Published on

ಹಾಸನ : ಜಿಲ್ಲೆ ಅರೆ ಮಲೆನಾಡು ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಿನದಾಗಿ ವ್ಯವಸಾಯಕ್ಕೆ ಒತ್ತನ್ನು ರೈತರು ನೀಡುತ್ತಾರೆ. ಹಾಸನ ಮುಖ್ಯವಾಗಿ ರಾಗಿ, ಕೊಬ್ಬರಿ, ಭತ್ತ ಹಾಗೂ ಮುಸುಕಿನ ಜೋಳ, ಆಲೂಗಡ್ಡೆ ಇನ್ನಿತರ ಬೆಳೆಯನ್ನು ಬೆಳೆಯುವ ಜಿಲ್ಲೆಯಾಗಿದೆ. ಪ್ರತಿಯೊಬ್ಬ ರೈತರು ಮುಂಗಾರು ಹಾಗೂ ಹಿಂಗಾರು ಬೆಳೆಗಳನ್ನು ಮಾಡುತ್ತಾರೆ ಪ್ರತಿ ವರ್ಷ ಲಾಭ- ನಷ್ಟಗಳನ್ನು ಲೆಕ್ಕೆಸದೆ ಆಲೂಗಡ್ಡೆ ಬೆಳೆ ಮಾಡುತ್ತಾರೆ. ಕಳೆದ 2021 ನೇ ಸಾಲಿನಲ್ಲಿ ಆಲೂಗಡ್ಡೆ ಬೆಳೆ ರೈತರಿಗೆ ಹೆಚ್ಚಿನ ಆದಾಯವನ್ನು ತಂದು ಕೊಟ್ಟಿತ್ತು. ಅದರಂತೆ 2022ನೇ ಸಾಲಿನ ಮುಂಗಾರು ಅವಧಿಯಲಿ ್ಲಆಲೂಗಡ್ಡೆ ಬಿತ್ತನೆ ಬೀಜವೇ ದುಬಾರಿಯಾಗಿತ್ತು. ಅದನ್ನು ರೈತರು ಲೆಕ್ಕಿಸದೆ ಬಿತ್ತನೆ ಬೀಜವನ್ನು ಖರೀದಿ ಮಾಡಿ ಉತ್ತಮ ಬೆಳೆ ಬೆಳೆದಿದ್ದರು. ಆದರೆ ಬೆಲೆ ಸಿಗದೆ ತೋಟಗಳಲ್ಲೇ ಸಂಗ್ರಹಿಸಿದ್ದ ಆಲೂಗಡ್ಡೆ ಕೊಳೆತು ಹೋಗಿತ್ತು. ಅಳಿದುಳಿದ ಆಲೂಗಡ್ಡೆ ಬೆಳೆಯನ್ನು ಸಿಕ್ಕ ಬೆಲೆಗೆ ಮಾರಾಟ ಮಾಡಿ ರೈತರು ಕೈಸುಟ್ಟುಕೊಂಡಿದ್ದರು.

ಕಳೆದ 2022ನೇ ಸಾಲಿನಲ್ಲಿ ಹಾಸನ ಜಿಲ್ಲೆಯಾದ್ಯಂತ 6970.47 ಹೆಕ್ಟರ್‌ನಷ್ಟು ಮುಂಗಾರು ಆಲೂಗಡ್ಡೆ ಬೆಳೆಯನ್ನು ರೈತರು ಬೆಳೆೆದಿದ್ದು, ಮಳೆಹಾನಿ ಇಂದ ಸುಮಾರೂ 5652.90 ಹೆಕ್ಟರ್‌ಗಳಲ್ಲಿ ಆಲೂಗಡ್ಡೆ ನಾಶವಾಗಿತ್ತು. ಅಲ್ಲದೆ ಬಿತ್ತನೆ ಬೀಜ ಕೊಂಡುಕೊಂಡಿದ್ದಕ್ಕಿಂತ ಕಡಿಮೆ ಹಣಕ್ಕೆ ಆಲೂಗಡ್ಡೆ ಖರೀದಿಯಾಗಿದ್ದು ರೈತರಲ್ಲಿ ಸಾಕಷ್ಟು ನಷ್ಟ ಉಂಟುಮಾಡಿತ್ತು.

ಆದರೂ ಚಲ ಬಿಡದ ರೈತರು 2022ರ ನವೆಂಬರ್- ಡಿಸೆಂಬರ್‌ನ ಹಿಂಗಾರಿನಲ್ಲಿ ಆಲೂಗಡ್ಡೆ ಬೆಳೆ ಬೆಳೆಲು ಮುಂದಾಗಿದ್ದು, ಹಿಂಗಾರು ಬೆಳೆ ಹೆಕ್ಟೇರ್ ಲೆಕ್ಕದಲ್ಲಿ ಹಾಸನ 265, ಅರಸೀಕೆರೆ 15, ಬೇಲೂರು 35, ಅರಕಲಗೂಡು 22, ಚನ್ನರಾಯಪಟ್ಟಣ 8 ಒಟ್ಟು ಹಾಸನ ಜಿಲ್ಲೆಯಾದ್ಯಂತ 345.60 ಹೆಕ್ಟರ್‌ನಲ್ಲಿ ಆಲೂಗಡ್ಡೆ ಬೆಳೆಯನ್ನು ಬೆಳೆದಿದ್ದು, ಇದೀಗ ಬೆಳೆದು ನಿಂತಿರುವ ಆಲೂಗಡ್ಡೆ ವಿಚಿತ್ರವಾಗಿದ್ದು ಸಹಜ ಸ್ಥಿತಿಯಲ್ಲಿ ಇರಬೇಕಾದ ಆಲೂಗಡ್ಡೆಗಳು ಅಸಹಜವಾಗಿ ವಿವಿಧಾಕಾರಗಳಲ್ಲಿ ಕಂಡುಬರುತ್ತಿವೆ. ಇದರಿಂದ ಆಲೂಗಡ್ಡೆ ಮಾರಾಟವಾಗದ ಸ್ಥಿತಿಗೆ ತಲುಪಿದ್ದು ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ನೀಡಿರುವುದರಿಂದ ಈ ರೀತಿಯ ಸಮಸ್ಯೆ ಉಂಟಾಗಿದೆ ಎಂದು ರೈತರು ಬೇಸರಗೊಡಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ .

ಜಿಲ್ಲೆಯಲ್ಲಿ ಪಂಜಾಬ್‌ನ ಆಲೂಗಡ್ಡೆ ಬೆಳೆ ಮಾಡುವ ರೈತರು ಹೆಚ್ಚಾಗಿದ್ದು ಹಿಂಗಾರಿನಲ್ಲಿ ಆಲೂಗಡ್ಡೆ ಬೆಲೆ ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಿ, ನೀರು ಗೊಬ್ಬರವನ್ನು ಲೆಕ್ಕಿಸದೆ ದುಬಾರಿಯಾಗಿದ್ದ ಬಿತ್ತನೆ ಬೀಜದ ಆಲೂಗಡ್ಡೆಯನ್ನು ಖರೀದಿಸಿ ಉತ್ತಮ ಫಸಲು ಬರುವಂತೆ ಹಗಲು ರಾತ್ರಿ ಎನ್ನದೆ ಹಣವನ್ನು ಬೆೆಳೆಗೆ ಹಾಕಿದ್ದಾರೆ. ಆದರೆ ಹಿಂಗಾರಿನಲ್ಲಿ ಭೂಮಿಗೆ ಬಿತ್ತನೆ ಮಾಡಿರುವ ಬೀಜದ ಆಲೂಗಡ್ಡೆ ಗಿಡ ಚನ್ನಾಗಿ ಬೆಳೆದಿದೆ ಹೊರತು ಆಲೂಗಡ್ಡೆ ಮಾತ್ರ ವಿಚಿತ್ರ ರೀತಿಯ ಆಕಾರದಲ್ಲಿ ಬೆಳೆದಿರುವುದು ರೈತರಿಗೆ ಒಂದೆಡೆ ಆಶ್ಚರ್ಯವಾದರೆ ಇನ್ನೊಂದು ಕಡೆ ಪ್ರತಿ ವರ್ಷದಂತೆ ಈ ವರ್ಷವೂ ಕಳಪೆ ಗುಣಮಟ್ಟದ ಬೀಜವನ್ನು ಖರೀದಿಸಲಾಗಿದೆ ಎಂಬ ಬೇಸರ ಮನದಲ್ಲಿ ಕಡಲಾರಂಬಿಸಿದೆ.

ಮುಂಗಾರಿನಲ್ಲಿ ಕೈ ಸುಟ್ಟುಕೊಂಡಿದ್ದ ರೈತರಿಗೆ ಮತ್ತೆ ಹಿಂಗಾರು ಬೆಳೆಯಲ್ಲಿಯೂ ಸಹ ಅದೇ ಸ್ಥಿತಿ ಉಂಟಾಗಿದೆ. ಹೆಚ್ಚಿನ ಹಣ ಪಡೆದು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡಿರುವುದರಿಂದ ಈ ರೀತಿ ಆಲೂಗಡ್ಡೆ ಬೆಳೆದಿದ್ದು ಯಾವ ಉಪಯೋಗಕ್ಕೂ ಬಾರದಂತಾಗಿದ್ದು ಆದಾಯಕ್ಕಿಂತ ಹೆಚ್ಚಿನ ನಷ್ಟ ಉಂಟಾಗಿದೆ ಇದಕ್ಕೆ ತಕ್ಕ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

‘‘ಕಳೆದ ಐದು ಆರು ವರ್ಷಗಳಿಂದಲೂ ಹಾಸನದ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಖರೀದಿಸುತ್ತಿದ್ದು ಉತ್ತಮ ಗುಣಮಟ್ಟದ ಬಿತ್ತನೆ ಬೀಜ ನೀಡುವಲ್ಲಿ ಸ್ಥಳೀಯ ಮಾರುಕಟ್ಟೆ ವಿಫಲವಾಗುತ್ತಿದೆ ಪ್ರತಿವರ್ಷವೂ ಸಹ ರೈತರು ಬಿತ್ತನೆ ಬೀಜ ಖರೀದಿಯಲ್ಲಿ ಮೋಸ ಹೋಗುತ್ತಿದ್ದಾರೆ ಸರ್ಕಾರ ಮತ್ತು ಅಧಿಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶನವಾಗುತ್ತಿರುವುದು ರೈತ ಬದುಕಿಗೆ ಕಾಡ್ಗಿಚ್ಚು ಹಚ್ಚಿದಂತೆ ಆಗಿದೆ. ಸಾವಿರಾರು ರೂ. ವೆಚ್ಚ ಮಾಡಿ ಬೆಳೆ ಬೆಳೆದರು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯಿಂದ ವರ್ಷವಿಡಿ ರೈತರನ್ನು ಸಂಕಷ್ಟ ಪರಿಸ್ಥಿತಿ ದೂದಡಿದೆ. ವಿಚಿತ್ರ ರೀತಿಯಲ್ಲಿ ಆಲೂಗಡ್ಡೆ ಬೆಳೆ ಹುಟ್ಟಿದು ಮಾರಾಟಕ್ಕಾಗಲಿ ಅಥವಾ ಊಟಕ್ಕೆ ಆಗಲಿ ಅಥವಾ ಹಸುಗಳಿಗೆ ನೀಡಕ್ಕಾಗಲಿ ಪ್ರಯೋಜಕ್ಕೆ ಬಾರದೆ ಹೋಗಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ತೋಟಗಾರಿ ಇಲಾಖೆ ಎದುರು ಪ್ರತಿಭಟನೆ ಮಾಡಲಾಗುವುದು.’’

ರೈತ ಸಂಘದ ಮುಖಂಡ ರವಿ ಶಂಕರ್

‘‘ರೈತರಿಗೆ ನೀಡಿದ ಆಲೂಗಡ್ಡೆ ಬಿತ್ತನೆ ಬೀಜದಲ್ಲಿ ಸಮಸ್ಯೆಯಾಗಿರುವುದು ಸತ್ಯವಾಗಿದು,್ದಈ ಕುರಿತು ನಮಗೂ ಮಾಹಿತಿ ಇರಲಿಲ್ಲ. ಕರ್ನಾಟಕ, ಗುಜರಾತ್ ಹಾಗೂ ವಿವಿಧ ರಾಜ್ಯಗಳಿಗೆ ಪಂಜಾಬ್ ರಾಜ್ಯದಿಂದ ಬಿತ್ತನೆ ಬೀಜದ ಆಲೂಗಡ್ಡೆ ರಪ್ತುಆಗುವುದರಿಂದ ಪ್ರತಿಯೊಂದು ರಾಜ್ಯಗಳ ಮಣ್ಣಿಗೆ ಹೋಲುವ ಆಲೂಗಡ್ಡೆಗಳನ್ನು ಸಾಗಾಣೆ ಮಾಡಲಾಗುತ್ತದೆ. ಕರ್ನಾಟಕಕ್ಕೆ ಕೊಪ್ರಿ ಜ್ಯೋತಿ ಎಂಬ ತಳಿ ಆಲೂಗಡ್ಡೆ ನೀಡಲಾಗುತ್ತದೆ. ಗುಜರಾತ್‌ಗೆ ಪುಕ್‌ರಾಜ್ ತಳಿ ಆಲೂಗಡ್ಡೆಗಳನ್ನು ನೀಡಲಾಗುತ್ತದೆ. ಪುಕ್‌ರಾಜ್ ತಳಿಯನ್ನು ಕರ್ನಾಟಕದಲ್ಲಿ ಬೆಳೆದರೆ ಈ ರೀತಿ ಸಮಸ್ಯೆ ಎದುರಾಗುತ್ತದೆ ಯಾವುದೋ ಲಾಟ್‌ನಲ್ಲಿ ಈ ರೀತಿ ತಳಿ ಬದಲಾಗಿರುವ ಆಲೂಗಡ್ಡೆಗಳು ಬಂದಿರುವುದರಿಂದ ವಿಚಿತ್ರ ಆಲೂಗಡ್ಡೆ ಬೆಳೆದಿದೆ ಇಂತಹ ಆಲೂಗಡ್ಡೆ ಬೆಳೆದಿರುವ ಉಂಟಾಗಿರುವ ನಷ್ಟವನ್ನು ಪರಿಗಣಿಸಿ ಈಗಾಗಲೇ ರೈತರಿಗೆ ಪರಿಹಾರ ನೀಡಲಾಗಿದ್ದು, ಎಪಿಎಂಸಿ ಸಂಘದಿಂದಲೇ ಸಮಸ್ಯೆ ಬಗೆ ಹರಿಸಲಾಗಿದೆ . ಈ ರೀತಿಯ ಎಪಿಎಂಸಿಯಲ್ಲಿ ಯಾವುದೇ ಸಮಸ್ಯೆಗಳು ರೈತರಿಗೆ ಎದುರಾದಲ್ಲಿ ನಾವು ಸಹಕಾರ ನೀಡಿ ಬಗೆ ಹರಿಸುವ ಕೆಲಸ ಮಾಡಲಾಗುವುದು.’’*ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗೋಪಾಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net