

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ತಿಂಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಕೆಐಎಡಿಬಿ ವಿರುದ್ಧದ ರೈತರ ಅನಿರ್ದಿಷ್ಟಾವಧಿ ಧರಣಿ 32ನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಸರ್ಕಾರ ಮೌನ ಮುರಿಯದಿರುವುದು ಹೋರಾಟದ ಕಾವನ್ನು ದಿನೇದಿನೆ ಹೆಚ್ಚಿಸುತ್ತಿದೆ.
ಕಾಟಾಚಾರಕ್ಕೆ ಎಂಬಂತೆ ಭೂಸ್ವಾಧೀನ ಅಧಿಕಾರಿಗಳು, ತಹಸೀಲ್ದಾರ್ ಸೇರಿ ಬೆರಳೆಣಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಲ ಸಂಧಾನ ನಡೆಸಿ ವಾಪಸ್ ಆಗುತ್ತಿದ್ದಾರೆ. ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗುತ್ತಿದ್ದರೂ ಸರ್ಕಾರ ಕಾದುನೋಡುವ ತಂತ್ರ ಮುಂದುವರಿಸಿದೆ. ಇತ್ತೀಚಿಗೆ ಮಾಜಿ ಸಿಎಂ ಕುಮಾರಸ್ವಾಮಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಜನತಾಜಲಧಾರೆಗಾಗಿ ಜಿಲ್ಲೆಗೆ ಬಂದಿದ್ದರೆ ಹೊರತು ಧರಣಿಯ ಕೂಗಿಗೆ ಅವರು ಓಗೊಡಲಿಲ್ಲ ಎಂಬ ಆಕ್ರೋಶವೂ ಧರಣಿನಿರತರಲ್ಲಿದೆ. ಪ್ರತಿಪಕ್ಷಗಳ ಮುಖಂಡರೂ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೆ ಕಡೆಗಣಿಸಿರುವುದೂ ರೈತರ ಕಿಚ್ಚು ಹೆಚ್ಚಿಸುತ್ತಿದೆ. ಆಡಳಿತಾರೂಢ ಸರ್ಕಾರದ ಜನಪ್ರತಿನಿಧಿಗಳು ಕನಿಷ್ಠಪಕ್ಷ ಹೋರಾಟದ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ.
ಮಧ್ಯವರ್ತಿಗಳ ಹಾವಳಿ: ಭೂಸ್ವಾಧೀನ ವಿರೋಧಿಸಿ ಒಂದೆಡೆ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೆ ಮತ್ತೊಂದೆಡೆ ಭೂಮಾಫಿಯಾದವರು ರೈತರಿಗೆ ವಿವಿಧ ಆಮಿಷ ತೋರಿಸಿ ಜಮೀನುಗಳನ್ನು ಕಬಳಿಸಲು ಸಂಚುರೂಪಿಸುತ್ತಿದ್ದಾರೆ, ಚನ್ನರಾಯಪಟ್ಟಣ ಸುತ್ತಮುತ್ತಲ ಹಳ್ಳಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಬಡರೈತರು, ಕೆಲ ರೈತರ ಕೌಟುಂಬಿಕ ಸಮಸ್ಯೆ ಮತ್ತಿತರ ವಿಷಯಗಳನ್ನು ಸಂಗ್ರಹಿಸಿ ಅವರಿಗೆ ಹಣದ ಆಮಿಷ ತೋರಿಸಿ ಜಮೀನುಗಳನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಕೊಳ್ಳುತ್ತಿರುವ ಹುನ್ನಾರವೂ ಗರಿಬಿಚ್ಚಿದೆ. ಒಂದೆಡೆ ಕೆಐಎಡಿಬಿಯಿಂದ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರು ಸರ್ಕಾರದ ಪರಿಹಾರದ ಹಣ ಸಿಗುವ ಮೊದಲೇ ಮಧ್ಯವರ್ತಿಗಳ ಕಪಿಮುಷ್ಟಿಗೆ ಸಿಲುಕಿ ಅತಂತ್ರರಾಗುವ ಪರಿಸ್ಥಿತಿ ಎದುರಿಸುವಂತಾಗಿದೆ.
ರೈತರ ನ್ಯಾಯಯುತ ಹೋರಾಟಕ್ಕೆ ಸರ್ಕಾರ ಯಾವಾಗಲೂ ಬೆಂಬಲವಾಗಿ ನಿಲ್ಲಲಿದೆ. ಈ ಬಗ್ಗೆ ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ಅಧಿಕಾರಿಗಳು, ರೈತ ಮುಖಂಡರ ಸಭೆ ನಡೆಸಿ ಚರ್ಚಿಸಲಾಗುವುದು, ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು. ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ
ಧರಣಿ ಬೆಂಬಲಿಸಿ ದಸಂಸದಿಂದ ಕಾಲ್ನಡಿಗೆ
ಚನ್ನರಾಯಪಟ್ಟಣ: ಭೂಸ್ವಾಧೀನ ವಿರೋಧಿ ಹೋರಾಟವನ್ನು ಪ್ರತಿ ಮನೆಗೆ ಕೊಂಡೊಯ್ಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕರೆ ನೀಡಿದರು.
ಭೂಸ್ವಾಧೀನ ವಿರೋಧಿ ಹೋರಾಟದ 31 ನೇ ದಿನವಾದ ಬುಧವಾರ ದಸಂಸ ವತಿಯಿಂದ ದೇವನಹಳ್ಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚನ್ನರಾಯಪಟ್ಟಣದವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದರು.
ಪುರುಷ ಪ್ರಧಾನ ವ್ಯವಸ್ಥೆಯಿಂದ ಹೊರಬಂದು ಕುಡಗೋಲು ಕೈಯಲ್ಲಿ ಹಿಡಿವ ರೈತ ಮಹಿಳೆಯ ಕೈಗೆ ಹೋರಾಟ ನೀಡಿದರೆ ನಮ್ಮ ಹೋರಾಟ ಜಯದ ಕಡೆಗೆ ಸಾಗುತ್ತದೆ ಎಂದರು.
ಕೆಐಎಡಿಬಿ ಒಂದು ಸಂಸ್ಥೆಯಾಗಿ ಉಳಿದಿಲ್ಲ ಅದೊಂದು ರಿಯಲ್ ಎಸ್ಟೇಟ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ, ರೈತರು ಮಾಡುತ್ತಿರುವ ಹೋರಾಟ ನ್ಯಾಯಬದ್ಧವಾಗಿದ್ದು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದು ಬೇಡ ಎಂದು ಸಾಮಾಜಿಕ ಕಾರ್ಯಕರ್ತೆ ಮೈತ್ರಿ ಹೇಳಿದರು.