

ನಂಜನಗೂಡು: ತಾಲೂಕಿನಲ್ಲಿ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಕಾರ್ಖಾನೆಗಳು ಉದ್ಯೋಗ ನೀಡದೆ ವಂಚಿಸುತ್ತಿವೆ. ಒಪ್ಪಂದದಂತೆ ರೈತ ಮಕ್ಕಳಿಗೆ ಕಾಯಂ ಉದ್ಯೋಗ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದರು.
ತಾಲೂಕಿನ ಇಮ್ಮಾವುಹುಂಡಿ ಗ್ರಾಮದಲ್ಲಿ ಬುಧವಾರ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಇಮ್ಮಾವು, ತಾಂಡವಪುರ, ಕಲ್ಲಹಳ್ಳಿ ಸುತ್ತಮುತ್ತ ಸಾವಿರಾರು ಎಕರೆ ಕೃಷಿ ಭೂಮಿ ಹೊಂದಿದ್ದ ರೈತರಿಗೆ ಹಣದಾಸೆ ತೋರಿಸಿ ಉದ್ಯೋಗ ಭರವಸೆ ನೀಡಿ ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾದ ಮೇಲೆ ಕಂಪನಿಗಳು ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗಕ್ಕಾಗಿ ಅಲೆದಾಡಿಸಿದ ನಿದರ್ಶನಗಳು ಸಾಕಷ್ಟಿವೆ. ಐಟಿಸಿ ಮತ್ತು ರುಚ್ಚಾ ಕಾರ್ಖಾನೆಗಳಲ್ಲಿ ಒಪ್ಪಂದದಂತೆ ಉದ್ಯೋಗ ನೀಡಲು ನಿರಾಕರಿಸಿದಾಗ ರೈತ ಸಂಘದ ಸತತ ಹೋರಾಟದ ಫಲವಾಗಿ 300 ಸಂತ್ರಸ್ತ ರೈತ ಕುಟುಂಬಗಳಿಗೆ ಉದ್ಯೋಗ ಸಿಕ್ಕಿದೆ ಎಂದರು.
ದೇಶದ ಬಂಡವಾಳಶಾಹಿಗಳಿಗೆ 140 ಸಾವಿರ ಕೋಟಿ ರೂ. ಸಾಲ ನೀಡುವ ಸರ್ಕಾರ, ದೇಶದ 80 ಕೋಟಿ ಜನಸಂಖ್ಯೆಯ ರೈತರಿಗೆ 16 ಸಾವಿರ ಕೋಟಿ ರೂ. ಸಾಲ ನೀಡಲು ಮೀನಮೇಷ ಎಣಿಸುತ್ತದೆ. ಕಾಂಗ್ರೆಸ್, ಬಿಜೆಪಿ, ಜನತಾದಳ ಸೇರಿದಂತೆ ಯಾವುದೇ ಪಕ್ಷಗಳು ರೈತರ ಪರವಾಗಿಲ್ಲ. ರೈತರು ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್, ಮುಖಂಡರಾದ ಇಮ್ಮಾವು ರಘು, ನೀಲಮ್ಮ, ಶೈಲಜ, ಶಿರಮಳ್ಳಿ ಮಂಜುನಾಥ್, ಹರತಲೆ ಕೆಂಪಣ್ಣ, ಶಿವಣ್ಣ, ಜಿ.ಬಾಲು, ಸಣ್ಣಶೆಟ್ಟಿ, ಮಾಧು, ಜಯಪ್ರಕಾಶ್, ಮಹೇಶ್, ಸೂರಳ್ಳಿ ಮಾದಪ್ಪ ಇತರರಿದ್ದರು.